ಮಂಗಳೂರು: ರುಪ್ಯಾ ರುಪಾಂ ಮಕ್ಕಳ ಶಿಬಿರ ಸಮಾರೋಪ

ಮಂಗಳೂರು: ಮಾಂಡ್‌ ಸೊಭಾಣ್‌ ಆಯೋಜಿಸಿದ 25 ನೇ ವರ್ಷದ ಮಕ್ಕಳ ವಸತಿಯುತ ರಜಾ ಶಿಬಿರ ʻರುಪ್ಯಾ ರುಪಾಂʼ ಇದರ ಸಮಾರೋಪ ಸಮಾರಂಭವು ಮೇ 03 ರಂದು ಕಲಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿ ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜಿನ ಆಡಳಿತದಾರ ವಂ.ಡಾ. ಮೈಕಲ್‌ ಸಾಂತ್‌ ಮಾಯೋರ್ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿ ಸಂದೇಶ ನೀಡಿದರು. ʻʻಕಲೆಯು ವ್ಯಕ್ತಿಯನ್ನು ವಿಶಿಷ್ಟವಾಗಿಸುತ್ತದೆ. ಮಾಂಡ್‌ ಸೊಭಾಣ್‌ ರಜತ ಶಿಬಿರದಲ್ಲಿ ಕಲಿಯುವ ಅವಕಾಶ ಪಡೆದಿದ್ದಿರಿ. ಇಂತಹ ಭಾಷಿಕ, ಸಾಂಸ್ಕೃತಿಕ ಶಿಬಿರಕ್ಕೆ ತಮ್ಮ ಮಕ್ಕಳನ್ನು ಕಳುಹಿಸಿದ ಪೋಷಕರು ಅಭಿನಂದನಾರ್ಹರು. ಇಲ್ಲಿ ಮಕ್ಕಳು ಮೊಬೈಲ್‌ ಇಲ್ಲದೇ, ಇತರರೊಡನೆ ಹೊಂದಿಕೊಂಡು ಜೀವಿಸಲು ಕಲಿತಿದ್ದಾರೆ. ಕಲೆ ಸಾಹಿತ್ಯದತ್ತ ಒಲವು ತೋರಿಸಿದ್ದಾರೆ. ಅದನ್ನು ಬೆಳೆಸಿಕೊಳ್ಳಿ. ನೀವು ಕಲಿತದನ್ನು ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿʼʼ ಎಂದು ಕರೆ ಕೊಟ್ಟರು.  

ಶಿಬಿರದ ಉತ್ತಮ ಪ್ರದರ್ಶನ ನೀಡಿದ ಮಕ್ಕಳನ್ನು ಗೌರವಿಸಲಾಯಿತು. ನೃತ್ಯ ಶ್ರೇಷ್ಟ –  ಕ್ರಿಶಾ ವಿಯಾನ್ನಾ ಡಾಯಸ್‌, ಬೊರಿಮಾರ್‌,  ನಾಟಕ ಶ್ರೇಷ್ಟ –  ಆಲೋಮಾ ಲೋಬೊ, ಕಟೀಲ್‌,  ಗಾಯಾನ ಶ್ರೇಷ್ಟ – ಅವಿಟಾ ಪ್ರಿನ್ಸಿಯಾ ಮಿರಾಂದಾ, ಕುಲ್ಶೇಕರ, ಕೊಂಕಣಿ ಶ್ರೇಷ್ಟ – ಆಶೆಲ್‌ ರಿಯೊನಾ ಡಿಸೋಜ, ಕೆಲರಾಯ್‌ ಇವರಿಗೆ ತಲಾ 3500 ರೂಪಾಯಿ ನಗದು ಹಾಗೂ ಪ್ರಮಾಣ ಪತ್ರ ಲಭಿಸಿದರೆ, ಶಿಬಿರ ಶ್ರೇಷ್ಟಳಾಗಿ ಆಯ್ಕೆಗೊಂಡ ಆಲನಿ ದಾಂತಿ ಪಿಲಾರ್ ರೂ. 6000 ನಗದು ಬಹುಮಾನ ಪಡೆದರು.

ಕಳೆದ 25 ವರ್ಷಗಳಿಂದ ಈ ಶಿಬಿರಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿದ ಅರುಣ್‌ ರಾಜ್‌ ರೊಡ್ರಿಗಸ್‌ ಮತ್ತು ರೊನಾಲ್ಡ್‌ ಕ್ರಾಸ್ತಾ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗೌರವ ಅತಿಥಿ ರೊನಾಲ್ಡ್‌ ಮೆಂಡೊನ್ಸಾ ಮತ್ತು ಮಾಂಡ್‌ ಸೊಭಾಣ್‌ ಅಧ್ಯಕ್ಷ ಲುವಿ ಪಿಂಟೊ ಉಪಸ್ಥಿತರಿದ್ದರು.

ಇಯೊನಾ ಡಿಸೋಜ, ಮೂಡುಬೆಳ್ಳೆ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಸಿಯೊನಾ ಡಿಕುನ್ಹಾ, ಸಿಯೊನ್ ಮಿರಾಂದ, ಆಶೆಲ್ ಮಸ್ಕರೇನ್ಹಸ್‌ ಶಿಬಿರದ ತಮ್ಮ ಅನುಭವಗಳನ್ನು ಹಂಚಿಕೊಂಡರು. ಪರಾಗ್‌ ಸಾಹಿತ್ಯ ತರಬೇತಿ ಮುಖಾಂತರ ರಚಿಸಿದ ಸಾಹಿತ್ಯವನ್ನು ಶರ್ವಿನ್‌ ಪತ್ರಾವೊ ಸ್ನೇಹಲ್‌ ಜೀನ್ ಡಿಕುನ್ಹಾ ಮತ್ತು ಲೆನ್ವರ್‌ ಸಲ್ಹಾನ್ಹಾ ವಾಚಿಸಿದರು. ಲೆನ್ವಿನ್‌ ಪಿರೇರಾ, ಜೆನೆಲಿಯಾ ಆಲ್ಮೇಡಾ,  ರಿಯೊನ್‌ ಪಿಂಟೊ ಸಭಾ ಕಾರ್ಯಕ್ರಮದಲ್ಲಿ ಸಹಕರಿಸಿದರು. ಆಶ್ನಾ ಪಿರೇರಾ, ಮೂಡಬಿದ್ರೆ ಧನ್ಯವಾದವನ್ನಿತ್ತರು.

ನಂತರ ವಂ.ಡಾ. ಮೈಕಲ್‌ ಇವರು ಗಂಟೆ ಬಾರಿಸಿ 293 ನೇ ತಿಂಗಳ ವೇದಿಕೆಗೆ ಚಾಲನೆ ನೀಡಿದರು. ಶಿಬಿರದಲ್ಲಿ ಕಳೆದ 10 ದಿನಗಳಲ್ಲಿ ಕಲಿತ ಹಾಡು, ನೃತ್ಯಗಳನ್ನು ಮಕ್ಕಳು ಪ್ರದರ್ಶಿಸಿದರು. ಕೊನೆಗೆ ಅರುಣ್‌ ರಾಜ್‌ ರೊಡ್ರಿಗಸ್‌ ಬರೆದು ನಿರ್ದೇಶಿಸಿದ ಬದ್ಲಾವಣ್‌ ನಾಟಕ ಪ್ರದರ್ಶನಗೊಂಡಿತು. ರೊಯ್ಸ್ಟನ್‌ ಡಿಕುನ್ಹಾ, ಕಲಾಕುಲ್‌ ಸಂಗೀತದಲ್ಲಿ ಹಾಗೂ ಆಶ್ಲಿನ್‌ ವಿಸ್ಮಯ ಲೋಬೊ ಮತ್ತು ಸಂಜನಾ ರಿವಾ ಮತಾಯಸ್‌ ಹಿನ್ನೆಲೆಯಲ್ಲಿ ಸಹಕರಿಸಿದರು.

ಆಸ್ಟನ್‌ ಚಿರಾಗ್‌ ಲೋಬೊ ಮತ್ತು ಜೊಯ್ಲಿನ್‌ ಮೇರಿ ಲೋಬೊ ಸಭಾ ಕಾರ್ಯಕ್ರಮವನ್ನು ಹಾಗೂ ಅಲೋಮಾ ಲೋಬೊ ಮತ್ತು ಮೆಲ್ರೀನಾ ಮೆಂಡೊನ್ಸಾ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆ ಮಾಡಿದರು.

Leave a Reply

Your email address will not be published. Required fields are marked *