ಮೂಡುಬಿದಿರೆ: ವೇದ, ಉಪನಿಷತ್ತು, ದರ್ಶನ, ಸಾಹಿತ್ಯ ಹಾಗೂ ಭಾರತೀಯ ಜ್ಞಾನ ಪರಂಪರೆಯ ಅಪಾರ ಸಂಪತ್ತನ್ನು ತನ್ನೊಳಗೆ ಅಡಕಗೊಳಿಸಿರುವ ಸಂಸ್ಕೃತವು ಕೇವಲ ಒಂದು ಪ್ರಾಚೀನ ಭಾಷೆಯಲ್ಲ, ಜಗತ್ತಿಗೆ ಜ್ಞಾನ ಮತ್ತು ಚಿಂತನೆಯ ಬೆಳಕು ನೀಡಿದ ಸಮೃದ್ಧ ಭಾಷೆಯಾಗಿದೆ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಜಯಶಂಕರ್ ಕಂಗಣ್ಣಾರು ನುಡಿದರು.
ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ಬುಧವಾರ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಂಸ್ಕೃತೋತ್ಸವ’ ಕಾರ್ಯಕ್ರಮದಲ್ಲಿ ‘ಸಂಸ್ಕೃತದ ವಿಶ್ವ ವೈಭವ’ ಕುರಿತು ಮಾತನಾಡಿದ ಅವರು, ಸಂಸ್ಕೃತದ ಮಹತ್ವವನ್ನು ಭಾರತೀಯ ಜ್ಞಾನ ಪರಂಪರೆಯ ಹಿನ್ನೆಲೆಯಲ್ಲಿ ವಿವರಿಸಿದರು.











ಸಂಸ್ಕೃತವು ವೇದಗಳ ಮೂಲಕ ಭಾರತೀಯ ಸಾಂಸ್ಕೃತಿಕ ಜಗತ್ತಿಗೆ ಶಾಂತಿ, ಸಹಬಾಳ್ವೆ ಮತ್ತು ಲೋಕಕಲ್ಯಾಣದ ಸಂದೇಶವನ್ನು ನೀಡಿದೆ. ‘ಸರ್ವೇ ಜನಾಃ ಸುಖಿನೋ ಭವಂತು’ ಎಂಬ ಆಶಯವು ಸಮಸ್ತ ಮಾನವಕುಲದ ಒಳಿತನ್ನು ಬಯಸುವ ಭಾರತೀಯ ಚಿಂತನೆಯ ಪ್ರತೀಕವಾಗಿದೆ. ಸಂಸ್ಕೃತ ಸಾಹಿತ್ಯ ಮತ್ತು ಜ್ಞಾನ ಪರಂಪರೆಯಲ್ಲಿ ವ್ಯಕ್ತಿಯ ಒಳಿತಿನೊಂದಿಗೆ ಜಗತ್ತಿನ ಕಲ್ಯಾಣಕ್ಕೂ ಮಹತ್ವ ನೀಡಲಾಗಿದೆ.
ಸಂಸ್ಕೃತದಲ್ಲಿ ಕೇವಲ ಧಾರ್ಮಿಕ ಸಾಹಿತ್ಯ ಮಾತ್ರವಲ್ಲದೆ ಕಾವ್ಯ, ವ್ಯಾಕರಣ, ತತ್ವಶಾಸ್ತ್ರ, ಗಣಿತ, ಖಗೋಳ, ಆಯುರ್ವೇದ, ಯೋಗ, ಭಾಷೆ ಶಾಸ್ತ್ರ ಸೇರಿದಂತೆ ವಿವಿಧ ಜ್ಞಾನ ಕ್ಷೇತ್ರಗಳ ಅಪಾರ ಸಾಹಿತ್ಯ ಲಭ್ಯವಿದೆ. ಭಾರತೀಯ ಜ್ಞಾನ ಪರಂಪರೆಯ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ಸಂಸ್ಕೃತದ ಅಧ್ಯಯನ ಮಹತ್ವದ್ದಾಗಿದೆ ಎಂದರು.
ಸಂಸ್ಕೃತದಲ್ಲಿ ಏನಿಲ್ಲ ಎಂದು ಕೇಳುವುದಕ್ಕಿಂತ, ಸಂಸ್ಕೃತದಲ್ಲಿ ಏನೆಲ್ಲ ಇದೆ ಎಂಬುದನ್ನು ಅರಿಯುವ ಪ್ರಯತ್ನ ಮಾಡಬೇಕು. ಸಂಸ್ಕøತದ ಅಧ್ಯಯನವು ಭಾರತದ ಪ್ರಾಚೀನ ಜ್ಞಾನ ಪರಂಪರೆಯೊಂದಿಗೆ ಸಂಪರ್ಕ ಕಲ್ಪಿಸುತ್ತದೆ.
ಸಂಸ್ಕೃತವು ಭಾರತೀಯ ಭಾಷೆಗಳ ಮೇಲೆ ಬೀರಿರುವ ಪ್ರಭಾವವನ್ನು ವಿವರಿಸಿದ ಅವರು, ಭಾರತದ ಹಲವು ಭಾಷೆಗಳ ಪದಸಂಪತ್ತು ಮತ್ತು ಭಾಷೆ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಸಂಸ್ಕೃತದ ಪಾತ್ರವನ್ನು ನಿರ್ಲಕ್ಷಿಸಲಾಗದು. ಪ್ರತಿ ಭಾಷೆಯನ್ನೂ ಅದರದೇ ಆದ ವೈಶಿಷ್ಟ್ಯದಲ್ಲಿ ಗೌರವಿಸುವುದರ ಜೊತೆಗೆ, ಭಾಷೆಗಳ ನಡುವಿನ ಪರಸ್ಪರ ಸಂಬಂಧವನ್ನೂ ಅರಿಯಬೇಕು ಎಂದು ಹೇಳಿದರು.
ಸಂಸ್ಕೃತದ ಶ್ಲೋಕಗಳು, ಸುಭಾಷಿತಗಳು ಹಾಗೂ ಸಾಹಿತ್ಯ ಕೃತಿಗಳು ಕೇವಲ ಪಠಣಕ್ಕೆ ಸೀಮಿತವಾಗದೆ ಅವುಗಳಲ್ಲಿರುವ ಜ್ಞಾನ, ಮೌಲ್ಯ, ಜೀವನದರ್ಶನ ಮತ್ತು ವಿಶ್ವಕಲ್ಯಾಣದ ಸಂದೇಶವನ್ನು ಇಂದಿನ ಪೀಳಿಗೆ ಅರ್ಥಮಾಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಸಂಸ್ಕೃತವನ್ನು ಕೇವಲ ಹಿಂದಿನ ಕಾಲದ ಭಾಷೆಯಾಗಿ ನೋಡುವ ಬದಲು, ಭಾರತೀಯ ಜ್ಞಾನ ಪರಂಪರೆಯನ್ನು ಅರ್ಥಮಾಡಿಕೊಳ್ಳುವ ಜೀವಂತ ಅಧ್ಯಯನ ಕ್ಷೇತ್ರವಾಗಿ ಪರಿಚಯಿಸುವ ಅಗತ್ಯವಿದೆ ಎಂದರು.
ಆಳ್ವಾಸ್ ಆಯುರ್ವೇದ ಕಾಲೇಜಿನ ಸಂಹಿತಾ ಹಾಗೂ ಹಾಗೂ ಸಿದ್ಧಾಂತ ವಿಭಾಗದ ಮುಖ್ಯಸ್ಥೆ ಡಾ ಸೌಮ್ಯ ಸರಸ್ವತಿ ತಂತ್ರಾಂಶಗಳಲ್ಲಿ ಸಂಸ್ಕೃತವನ್ನು ಬಳಸುವುದರ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಭಟ್ ಗಾಳಿಮನೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಮಾನ್ಯ ಸ್ವಾಗತಿಸಿ, ಚೇತನಾ ವಂದಿಸಿ, ತೇಜಸ್ವಿ ಅತಿಥಿಗಳನ್ನು ಪರಿಚಯಿಸಿ, ಅನನ್ಯ ಹೆಗಡೆ ಪ್ರಾರ್ಥಿಸಿ, ಶಮಾ ನಿರೂಪಿಸಿದರು.
