ಕಾರ್ಕಳ: ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿಗೆ ರಜತ ಸಂಭ್ರಮ

ಕಾರ್ಕಳ: ಶಿಸ್ತು, ಗುಣಮಟ್ಟ, ಚಟುವಟಿಕಾ ಪೂರ್ಣ ಜ್ಞಾನಾಧಾರಿತ ಶಿಕ್ಷಣ ಹಾಗೂ ಅತ್ಯುತ್ತಮ ಫಲಿತಾಂಶಕ್ಕಾಗಿ ಉಡುಪಿ ಜಿಲ್ಲೆಯಲ್ಲಿಯೇ ಪ್ರಸಿದ್ಧಿಯಾಗಿರುವ ಸಂಸ್ಥೆ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜು.

ಅತೀ ಕಡಿಮೆ ಶುಲ್ಕ ಹಾಗೂ ಅಂಕಗಳ ಮಿತಿ ಇಲ್ಲದೆ ದಾಖಲಾತಿಯನ್ನು ಅಳವಡಿಸಿಕೊಂಡಿರುವ ವಿದ್ಯಾರ್ಥಿಸ್ನೇಹಿಯಾಗಿರುವ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜು ತನ್ನ ಶೈಕ್ಷಣಿಕ ಸೇವಾ ಪಯಣದಲ್ಲಿ 25 ವರ್ಷಗಳ ಸಾರ್ಥಕ ಮೈಲುಗಲ್ಲನ್ನು ತಲುಪಿದೆ. ಈ ಸವಿನೆನಪನ್ನು ಇನ್ನಷ್ಟು ಅವಿಸ್ಮರಣೀಯಗೊಳಿಸಲು ಸಂಸ್ಥೆಯು 2026-27ನೇ ಶೈಕ್ಷಣಿಕ ಸಾಲಿನಲ್ಲಿ ಗ್ರಾಮೀಣ ಹಾಗೂ ಬಡ ಕುಟುಂಬಗಳ 25 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಘೋಷಣೆ ಮಾಡಿದೆ. ವಾಣಿಜ್ಯ ಹಾಗೂ ವಿಜ್ಞಾನ ವಿಭಾಗ ಸೇರಿ ಒಟ್ಟು 25 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲು ಸಂಸ್ಥೆಯ ಆಡಳಿತ ಮಂಡಳಿಯು ತೀರ್ಮಾನಿಸಿದೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದಾಗಿ ಕಲಿಕೆಯಿಂದ ವಂಚಿತರಾಗಬಾರದೆಂಬ ಕಳಕಳಿ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ ನವರದ್ದು. ಇದಕ್ಕಾಗಿ 2025-26ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ಬಡ ಮತ್ತು ಗ್ರಾಮೀಣ ಪ್ರದೇಶಗಳ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಕರೆಯಲಾಗಿದೆ. ಅರ್ಹ ವಿದ್ಯಾರ್ಥಿಗಳು ಸಂಸ್ಥೆಗೆ ಭೇಟಿ ನೀಡಿ ಪ್ರಾಚಾರ್ಯರಿಗೆ ಅರ್ಜಿ ಸಲ್ಲಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ವಿವಿಧ ಮಾನದಂಡಗಳನುಸಾರ ಅರ್ಜಿ ಪರಿಶೀಲನೆ ನಡೆಸಿ ಉಚಿತ ಶಿಕ್ಷಣಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಹತ್ತನೇ ತರಗತಿಯಲ್ಲಿ ಶೇಖಡಾ 96ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
ಹತ್ತನೇ ತರಗತಿಯಲ್ಲಿ ಶೇಖಡಾ 96ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಾಣಿಜ್ಯ ಮತ್ತು ವಿಜ್ಞಾನ ವಿಭಾಗಕ್ಕೆ ಉಚಿತ ದಾಖಲಾತಿ ನೀಡಲಾಗುತ್ತದೆ. 90 ಶೇಕಡಾಕ್ಕಿಂತ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ 50% ರಿಯಾಯಿತಿ ನೀಡಲಾಗುತ್ತದೆ. ಸರಕಾರಿ ಪ್ರೌಢಶಾಲೆಗಳಲ್ಲಿ ಅಧ್ಯಯನ ಮಾಡಿದ್ದಲ್ಲಿ 85% ಅಂಕಗಳನ್ನು ಗಳಿಸಿದ್ದರೂ ಶುಲ್ಕದಲ್ಲಿ 50% ರಿಯಾಯಿತಿ ಸಿಗಲಿದೆ. ಕ್ರೀಡಾ ಕೋಟಾದಡಿ ರಾಜ್ಯಮಟ್ಟದ ಸಾಧನೆಗೈದ ವಿದ್ಯಾರ್ಥಿಗಳಿಗೆ 50% ಶುಲ್ಕ ವಿನಾಯಿತಿ ಹಾಗೂ ರಾಷ್ಟ್ರಮಟ್ಟದ ಸಾಧನೆಗೈದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಅವಕಾಶವಿರುತ್ತದೆ. ಕಳೆದ 2025-26 ನೇ ಸಾಲಿನಲ್ಲಿ ಅಂಕ ಗಳಿಕೆ ಹಾಗೂ ಕ್ರೀಡಾ ಕೋಟಾದಡಿ ಒಟ್ಟು 62 ಲಕ್ಷದ ಹತ್ತು ಸಾವಿರ ರೂಪಾಯಿಗಳ ಶುಲ್ಕ ಮನ್ನಾ ಹಾಗೂ ಬಡ ವಿದ್ಯಾರ್ಥಿಗಳಿಗೆ ಮತ್ತು ಒಂದೇ ಕುಟುಂಬದಿಂದ ಇಬ್ಬರು ವಿದ್ಯಾರ್ಥಿಗಳಿದ್ದಲ್ಲಿ ಅಂತಹ ಸಂದರ್ಭದಲ್ಲಿಯೂ ಶುಲ್ಕ ವಿನಾಯಿತಿ ನೀಡಿದ್ದು ಸೇರಿದಂತೆ ಒಟ್ಟು 18 ಲಕ್ಷದ 50 ಸಾವಿರ ರೂಪಾಯಿಗಳ ಶುಲ್ಕ ವಿನಾಯಿತಿ ನೀಡಲಾಗಿದೆ. ಈ ಮೂಲಕ ಕಳೆದ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 80 ಲಕ್ಷದ 60 ಸಾವಿರ ರೂಪಾಯಿಗಳ ಶುಲ್ಕ ಮನ್ನಾ ಮಾಡಲಾಗಿದೆ. ಹತ್ತನೇ ತರಗತಿಯಲ್ಲಿ ಅಂಕಗಳು ಕಡಿಮೆ ಇದ್ದು ಶುಲ್ಕ ಭರಿಸಲು ಸಾಧ್ಯವಿಲ್ಲದ ಬಡ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರು ಕಾಲೇಜನ್ನು ಸಂಪರ್ಕಿಸಿದಲ್ಲಿ ಅಂತಹ ವಿದ್ಯಾರ್ಥಿಗಳಿಗೂ ಶುಲ್ಕ ವಿನಾಯಿತಿ ನೀಡಲಾಗುವುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *