ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ “ವಿದ್ಯಾರ್ಥಿ ಜೀವನ ಹಾಗೂ ನೈತಿಕತೆ” ಕುರಿತು ವಿಶೇಷ ಉಪನ್ಯಾಸ

ಮೂಡುಬಿದಿರೆ: ವಿದ್ಯಾರ್ಥಿ ಜೀವನವು ವ್ಯಕ್ತಿತ್ವ ನಿರ್ಮಾಣದ ಅತ್ಯಂತ ಪ್ರಮುಖ ಹಂತವಾಗಿದ್ದು, ಈ ಅವಧಿಯಲ್ಲಿ ಬೆಳೆಸಿಕೊಳ್ಳುವ ಶಿಸ್ತು, ನೈತಿಕ ಮೌಲ್ಯಗಳು, ಮಾನವೀಯ ಗುಣಗಳು ಹಾಗೂ ಸ್ಪಷ್ಟ ಗುರಿಗಳು ಭವಿಷ್ಯದ ಬದುಕಿಗೆ ಭದ್ರ ಬುನಾದಿಯಾಗುತ್ತವೆ ಎಂದು ಖ್ಯಾತ ಯಕ್ಷಗಾನ ಅರ್ಥದಾರಿಗಳು ಹಾಗೂ ವಿದ್ವಾಂಸರಾದ ಪ್ರೊ. ಪವನ ಕಿರಣಕೆರೆ ನುಡಿದರು.

ಆಳ್ವಾಸ್ ಪದವಿಪೂರ್ವ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆ (ಎನ್‍ಎಸ್‍ಎಸ್), ರೆಡ್‍ಕ್ರಾಸ್ ಹಾಗೂ ರೇಂಜರ್ಸ್ ಮತ್ತು ರೋವರ್ಸ್ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ “ವಿದ್ಯಾರ್ಥಿ ಜೀವನ ಹಾಗೂ ನೈತಿಕತೆ” ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನವು ಭವಿಷ್ಯದ ಬದುಕನ್ನು ರೂಪಿಸಿಕೊಳ್ಳುವ ಸುಂದರ ಅವಕಾಶವಾಗಿದೆ. ಜ್ಞಾನಾರ್ಜನೆಯ ಜೊತೆಗೆ ನೈತಿಕತೆ, ಮಾನವೀಯತೆ, ಶಿಸ್ತು ಹಾಗೂ ಜವಾಬ್ದಾರಿಯಂತಹ ಗುಣಗಳನ್ನು ಬೆಳೆಸಿಕೊಳ್ಳುವುದು ಅಗತ್ಯ. ಕಲಿಕೆಯ ಪ್ರಕ್ರಿಯೆ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗಿರದೆ, ಜೀವನಾನುಭವಗಳ ಮೂಲಕವೂ ನಡೆಯುತ್ತದೆ. ಜೀವನದಲ್ಲಿ ಎದುರಾಗುವ ಅನುಭವಗಳು ವ್ಯಕ್ತಿಯ ಚಿಂತನೆ, ನಿರ್ಧಾರ ತೆಗೆದುಕೊಳ್ಳುವ ಸಾಮಥ್ರ್ಯ ಹಾಗೂ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ಜೀವನದಲ್ಲಿ ಗುರಿ ಅತ್ಯಂತ ಮುಖ್ಯ. ಆಗಾಗ್ಗೆ ಗುರಿಗಳನ್ನು ಬದಲಾಯಿಸುವುದಕ್ಕಿಂತ, ತಮ್ಮ ಸಾಮಥ್ರ್ಯ ಹಾಗೂ ಆಸಕ್ತಿಗೆ ಅನುಗುಣವಾಗಿ ಸ್ಪಷ್ಟವಾದ ಗುರಿಯನ್ನು ರೂಪಿಸಿಕೊಂಡು ಅದನ್ನು ಸಾಧಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸಬೇಕು. ಗುರಿಯಲ್ಲಿ ನಿರ್ದಿಷ್ಟತೆ, ಸಾಧಿಸುವ ಛಲ ಹಾಗೂ ಪರಿಶ್ರಮವಿದ್ದಾಗ ಮಾತ್ರ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಸಾಧ್ಯ ಎಂದರು.
ನಮ್ಮ ಜೀವನವನ್ನು ಕೇವಲ ಸಾಧನೆಗಳು ಮಾತ್ರ ಗುರುತಿಸುವುದಿಲ್ಲ, ನಾವು ಹೊಂದಿರುವ ಮೌಲ್ಯಗಳು ಹಾಗೂ ನಮ್ಮ ನಡವಳಿಕೆಯೂ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ನೈತಿಕತೆ ವ್ಯಕ್ತಿಯ ಬದುಕಿಗೆ ಅರ್ಥವನ್ನು ನೀಡುವುದರ ಜೊತೆಗೆ, ಸಮಾಜದಲ್ಲಿ ಆತನಿಗೆ ಗೌರವ ಹಾಗೂ ವಿಶ್ವಾಸವನ್ನು ತಂದುಕೊಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಅವಧಿಯಲ್ಲಿಯೇ ಪ್ರಾಮಾಣಿಕತೆ, ಜವಾಬ್ದಾರಿ, ಸಹಾನುಭೂತಿ, ಶಿಸ್ತು ಹಾಗೂ ಪರಸ್ಪರ ಗೌರವದಂತಹ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ್ರತಿಯೊಬ್ಬ ಸಾಧಕನ ಯಶಸ್ಸಿನ ಹಿಂದೆ ನಿರಂತರ ಪರಿಶ್ರಮ, ಸವಾಲುಗಳನ್ನು ಎದುರಿಸುವ ಮನೋಭಾವ, ಆತ್ಮವಿಶ್ವಾಸ ಹಾಗೂ ಉತ್ತಮ ಜೀವನ ಮೌಲ್ಯಗಳು ಅಡಗಿರುತ್ತವೆ. ಉತ್ತಮ ಬದುಕನ್ನು ಕಟ್ಟಿಕೊಳ್ಳುವ ಅವಕಾಶ ನಮಗೆ ದೊರೆತಿರುವಾಗ, ಅದನ್ನು ಕೇವಲ ವೈಯಕ್ತಿಕ ಯಶಸ್ಸಿಗೆ ಸೀಮಿತಗೊಳಿಸದೆ, ಸಮಾಜಕ್ಕೂ ಉಪಯುಕ್ತವಾಗುವ ರೀತಿಯಲ್ಲಿ ರೂಪಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪಪ್ರಾಂಶುಪಾಲೆ ಜಾನ್ಸಿ ಪಿ. ಎನ್, ಶಿಕ್ಷಣವು ಕೇವಲ ಅಂಕಗಳನ್ನು ಗಳಿಸುವುದಕ್ಕೆ ಸೀಮಿತವಾಗದೆ, ಉತ್ತಮ ವ್ಯಕ್ತಿತ್ವವನ್ನು ರೂಪಿಸುವ ಸಾಧನವಾಗಬೇಕು. ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆ ಹಾಗೂ ಸಾಮಥ್ರ್ಯವನ್ನು ಗುರುತಿಸಿಕೊಂಡು, ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ಶಿಕ್ಷಣದ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ಅರಿತುಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ., ಸಂಸ್ಕೃತ ವಿಭಾಗದ ಮುಖ್ಯಸ್ಥ ಅಂಬರೀಷ್ ಚಿಪ್ಳೂಣಕರ್ ಉಪಸ್ಥಿತರಿದ್ದರು. ಲಿಖಿತಾ ಕಾರ್ಯಕ್ರಮ ನಿರೂಪಿಸಿ, ಅಕ್ಷಯ್ ಸಿದ್ದಪ್ಪ ಸ್ವಾಗತಿಸಿ, ದೀಕ್ಷಿತಾ ವಂದಿಸಿದರು.

Leave a Reply

Your email address will not be published. Required fields are marked *