‘ನೀನು ಒಂಟಿಯಲ್ಲ’ – ಆಳ್ವಾಸ್ ಕಾಲೇಜಿನಲ್ಲಿ ಆತ್ಮಹತ್ಯೆ ಕುರಿತು ಮನೋಭಾವ ಬದಲಾವಣೆಗೆ ಸಂವಾದ

ಮೂಡುಬಿದಿರೆ: ಆಳ್ವಾಸ್ ವೆಲ್‍ನೆಸ್ ತರಬೇತಿ ಕೇಂದ್ರ, ಆಳ್ವಾಸ್ ಕಾಲೇಜಿನ ಮನೋವಿಜ್ಞಾನ ವಿಭಾಗ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗಗಳ ಜಂಟಿ ಆಶ್ರಯದಲ್ಲಿ ಆಯೋಜನೆಗೊಂಡ ‘ನೀನು ಒಂಟಿಯಲ್ಲ- ಆತ್ಮಹತ್ಯೆ ಕುರಿತು ಮನೋಭಾವ ಬದಲಾವಣೆಗೆ ಮುಕ್ತ ಸಂವಾದ’’ ಕಾರ್ಯಕ್ರಮ ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ನಡೆಯಿತು.

ಆಳ್ವಾಸ್ ಪಿಯು ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಲಿಝಿ ಸಾಜಿ ಮಾತನಾಡಿ, ಶಿಕ್ಷಕರ ಕರ್ತವ್ಯ ಕೇವಲ ಪಾಠ ಬೋಧಿಸುವುದಕ್ಕೆ ಸೀಮಿತವಾಗಿಲ್ಲ. ವಿದ್ಯಾರ್ಥಿಗಳ ಮನಸ್ಸನ್ನು ಅರ್ಥಮಾಡಿಕೊಳ್ಳುವುದು, ಅವರ ಆತಂಕಗಳನ್ನು ಆಲಿಸುವುದು ಮತ್ತು ಅಗತ್ಯವಿದ್ದಾಗ ಅವರಿಗೆ ಬೆಂಬಲವಾಗಿ ನಿಲ್ಲುವುದೂ ಶಿಕ್ಷಕರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ತರಗತಿಯಲ್ಲಿ ಉತ್ತಮವಾಗಿ ಕಾಣಿಸಿಕೊಂಡರೂ, ಅವರ ವೈಯಕ್ತಿಕ ಜೀವನದಲ್ಲಿ ಹಲವು ರೀತಿಯ ಒತ್ತಡ, ಆತಂಕ, ಭಯ ಅಥವಾ ಗೊಂದಲಗಳನ್ನು ಎದುರಿಸುತ್ತಿರಬಹುದು. ಇಂತಹ ಸಂದರ್ಭಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ವರ್ತನೆಯಲ್ಲಾಗುವ ಸೂಕ್ಷ್ಮ ಬದಲಾವಣೆಗಳನ್ನು ಗಮನಿಸಿ, ಅವರೊಂದಿಗೆ ಆತ್ಮೀಯವಾಗಿ ಮಾತನಾಡಲು ಮುಂದಾಗಬೇಕು. ಒಬ್ಬ ಶಿಕ್ಷಕ ವಿದ್ಯಾರ್ಥಿಗೆ ‘ನಿನ್ನ ಸಮಸ್ಯೆಯನ್ನು ಹೇಳಿಕೊಳ್ಳಬಹುದು, ನಾನು ಕೇಳಲು ಸಿದ್ಧನಿದ್ದೇನೆ’ ಎಂಬ ಭರವಸೆ ನೀಡುವುದು ಕೂಡ ಮಹತ್ವದ ಬೆಂಬಲವಾಗುತ್ತದೆ ಎಂದರು. ಅದೇ ರೀತಿ, ವಿದ್ಯಾರ್ಥಿಗಳೂ ತಮ್ಮ ಸಮಸ್ಯೆಗಳನ್ನು ಶಿಕ್ಷಕರೊಂದಿಗೆ ಹಂಚಿಕೊಳ್ಳಲು ಯಾವುದೇ ಹಿಂಜರಿಕೆ ಅಥವಾ ಭಯ ಹೊಂದಬಾರದು. ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ; ಅಗತ್ಯ ಸಂದರ್ಭದಲ್ಲಿ ಮಾರ್ಗದರ್ಶಕರಾಗಿ, ಕೇಳುವವರಾಗಿ ಹಾಗೂ ಬೆಂಬಲ ನೀಡುವವರಾಗಿಯೂ ಇರಬಲ್ಲರು. ಸಮಸ್ಯೆಯನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಒಂಟಿಯಾಗಿ ಹೋರಾಡುವುದಕ್ಕಿಂತ, ವಿಶ್ವಾಸವಿರುವ ಶಿಕ್ಷಕರೊಂದಿಗೆ ಮಾತನಾಡುವುದು ಪರಿಹಾರದತ್ತ ಸಾಗುವ ಮೊದಲ ಹೆಜ್ಜೆಯಾಗಬಹುದು ಎಂದು ತಿಳಿಸಿದರು.

ಆಪ್ತ ಸಮಲೋಚಕಿ ರಾಧಿಕಾ ಅಡಪ್ಪಾ ಮಾತನಾಡಿ, ಜೀವನದ ಕಠಿಣ ಹಂತಗಳಲ್ಲಿ ಕೆಲವರಿಗೆ ಆತ್ಮಹತ್ಯೆಯಂತಹ ನಕಾರಾತ್ಮಕ ಆಲೋಚನೆಗಳು ಮೂಡಬಹುದು. ಇಂತಹ ಆಲೋಚನೆಗಳು ಮುಂದುವರಿದಾಗ ಅಥವಾ ಅವುಗಳನ್ನು ನಿಯಂತ್ರಿಸಲು ಸಾಧ್ಯವಾಗದ ಸಂದರ್ಭದಲ್ಲಿ ಅವುಗಳನ್ನು ನಿರ್ಲಕ್ಷಿಸದೆ ಸೂಕ್ತ ಮತ್ತು ವೃತ್ತಿಪರ ನೆರವು ಪಡೆಯಬೇಕು ಎಂದರು.
ಸಂವಾದದಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಆಕಾಶ್ ಎಂ., ಆಳ್ವಾಸ್ ಕಾಲೇಜಿನ ಸಿಎ ವಿದ್ಯಾರ್ಥಿ ಕವನಾ, ಆಳ್ವಾಸ್ ಕಾಲೇಜಿನ ಬಿಬಿಎ ವಿಭಾಗದ ಹಿರಿಯ ವಿದ್ಯಾರ್ಥಿ ರಾಹುಲ್ ಪಿಳ್ಳೈ, ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಸಮಾಜಕಾರ್ಯ ವಿದ್ಯಾರ್ಥಿ ಕೌಶಿಕ್, ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಅಧ್ಯಾಪಕಿ ಡಾ. ಜ್ಯೋತಿ ರೈ ಭಾಗವಹಿಸಿದರು.
‘ಸಂಕಷ್ಟಗಳು ನಿಜ’, ‘ವಿಭಿನ್ನವಾಗಿ ಬದುಕುವುದು ಎಂದರೆ ಕಡಿಮೆಯಾಗಿ ಬದುಕುವುದಲ್ಲ’ ಹಾಗೂ ‘ಜೀವನ ಎಚ್ಚರಿಕೆಯಿಲ್ಲದೆ ಬದಲಾದಾಗ’ ಎಂಬ ವಿಚಾರಗಳನ್ನು ಕೇಂದ್ರವಾಗಿಟ್ಟುಕೊಂಡು ಚರ್ಚೆ ನಡೆಸಲಾಯಿತು.
ಚರ್ಚೆಯಲ್ಲಿ ವೈಯಕ್ತಿಕ ಅನುಭವಗಳು, ಜೀವನದ ಕಠಿಣ ಹಂತಗಳನ್ನು ಎದುರಿಸಿದ ಸಂದರ್ಭಗಳು ಹಾಗೂ ಅವುಗಳಿಂದ ಹೊರಬರಲು ದೊರೆತ ಬೆಂಬಲದ ಕುರಿತು ಹಂಚಿಕೊಳ್ಳಲಾಯಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಪ್ರಾಚಾರ್ಯ ಡಾ ಕುರಿಯನ್, ವೆಲ್‍ನೆಸ್ ತರಬೇತಿ ಕೇಂದ್ರದ ನಿರ್ದೇಶಕಿ ಡಾ ದೀಪಾ ಕೊಠಾರಿ, ಸಹಾಯಕ ಪ್ರಾಧ್ಯಪಕಿ ವೈದೇಹಿ ಇದ್ದರು. ಮನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಪಕಿ ಅಝಾನಾ ಕಾರ್ಯಕ್ರಮ ನಿರೂಪಿಸಿ ಅಯೋನಾ ವಂದಿಸಿದರು.

Leave a Reply

Your email address will not be published. Required fields are marked *