‘ಮಂಗಳೂರು’ ಕೇವಲ ಒಂದು ಹೆಸರಲ್ಲ- Article by Geeta Laxmish

✍️ ಗೀತಾ ಲಕ್ಷ್ಮೀಶ್

ಹೆಸರು ಅನ್ನುವುದು ಒಂದು ಚಿಕ್ಕ ವಿಚಾರ ಅಲ್ಲವೇ ಅಲ್ಲ. ಯಾವುದೇ ಮಗು ಹುಟ್ಟುವಾಗ ಕೇವಲ ಮಗು ಅಷ್ಟೇ, ಆದರೆ ಆ ಮಗುವಿಗೆ ನಿಜವಾದ ಅಸ್ತಿತ್ವ, ಐಡೆಂಟಿಟಿ ಸಿಗುವುದು ನಾಮಕರಣ ಶಾಸ್ತ್ರದ ಬಳಿಕ. ಹಾಗಾಗಿ ಎಲ್ಲಾ ಭಾಷಿಗರಿಗೆ, ಧರ್ಮದವರಿಗೆ ನಾಮಕರಣ ಅನ್ನುವುದು ಪ್ರಮುಖ ಘಟ್ಟ. ಒಂದು ಹೆಸರು ವ್ಯಕ್ತಿಯನ್ನು ಮಾತ್ರ ಅಲ್ಲ ಅವನ ಹಿನ್ನೆಲೆಯನ್ನು ಸೂಚಿಸುತ್ತದೆ. ಉದಾಹರಣೆಗೆ ಶ್ರೀಮತಿ ಗೀತಾ ಲಕ್ಷ್ಮೀಶ ಶೆಟ್ಟಿ, ಮಂಗಳೂರು ಇದು ನನ್ನ ಹೆಸರನ್ನು ಮಾತ್ರ ಅಲ್ಲದೆ ನನ್ನ ಕುರಿತಾಗಿ ಹೀಗೆ ಮಾಹಿತಿ ನೀಡಬಲ್ಲದು. ಶ್ರೀಮತಿ ಗೀತಾ.. ಮದುವೆಯಾಗಿರುವ ಹಿಂದೂ ಮಹಿಳೆ, ಲಕ್ಷ್ಮೀಶ ಅನ್ನುವವರ ಮಡದಿ, ತುಳುನಾಡಿನ ಬಂಟ ಸಮಾಜದ ಶೆಟ್ಟಿ ಉಪಪಂಗಡಕ್ಕೆ ಸೇರಿದವರು, ಮಂಗಳೂರು ಮೂಲದವರು. ಇವರು ಸನಾತನ ಧರ್ಮವನ್ನು ಅನುಸರಿಸುವವರು, ನಾಗಾರಾಧನೆ ಮತ್ತು ದೈವಾರಾಧನೆ ಇವರ ಮೂಲ ಆಚರಣೆ, ಹಾಗೆಯೇ ತುಳು ಇವರ ಮಾತೃ ಭಾಷೆ. ಇದು ಸಾಮಾನ್ಯರಲ್ಲಿ ಅತಿ ಸಾಮಾನ್ಯರೂ ಕೂಡ ಅರ್ಥೈಸಿಕೊಳ್ಳಬಹುದಾದ ನನ್ನ ಹೆಸರಿನ ಹಿನ್ನೆಲೆ. ಇಷ್ಟು ಮಾಹಿತಿ ನಾವು ಯಾವುದೇ ಜಾತಿ, ಧರ್ಮ, ಮತದ ವ್ಯಕ್ತಿಯ ಹೆಸರನ್ನು ತೆಗೆದುಕೊಂಡರು ನಮಗೆ ಅನಾಯಾಸವಾಗಿ ಸಿಗುವಂತಹದು. ಹಾಗಾಗಿ ಹೆಸರು ವ್ಯಕ್ತಿಯದ್ದೇ ಆಗಲಿ, ಊರು, ಕೇರಿ, ಜಿಲ್ಲೆ , ರಾಜ್ಯ ಅಥವಾ ದೇಶದ್ದೇ ಆಗಲಿ ಅದು ಕೇವಲ ಹೆಸರಲ್ಲ ಅದು ಅಸ್ತಿತ್ವ ಅದರಲ್ಲಿ ಒಂದಷ್ಟು ಹಿನ್ನೆಲೆ, ಮಾಹಿತಿ, ಇತಿಹಾಸವಿರುತ್ತದೆ.

ಮಂಗಳೂರು ಅನ್ನುವುದು ಕೂಡ ಅಂತಹ ಭವ್ಯವಾದ ಇತಿಹಾಸವನ್ನು ಹೊಂದಿದೆ. ಈ ವಿಷಯದಲ್ಲಿ ತುಂಬಾ ಸಂಶೋಧನಾತ್ಮಕವಾಗಿ ಅತಿ ಆಳವಾಗಿ ಮಾತನಾಡಬಹುದು ಆದರೂ ಬೇಡ ಎಲ್ಲರಿಗೆ ತಿಳಿಯುವ ಹಾಗೆ ಸರಳವಾಗಿ ಹೇಳುವುದಾದರೆ ತಾಯಿ ಮಂಗಳೆಯ ಊರು ಮಂಗಳೂರು. ಇದು ನಮ್ಮ ಊರಿನ ಪುರಾಣ ಪುರಾವೆ. ಇದಕ್ಕೆ ಮಹತ್ವ ಕೊಡಬೇಕೇ..? ಎಂದು ನೀವು ಕೇಳಿದರೆ ಯಾಕೆ ಕೊಡಬಾರದು…? ಉಡುಪಿಯ ಕೃಷ್ಣನಿಂದ ಉಡುಪಿ, ತಾಯಿ ಹಾಸನಾಂಬೆಯಿಂದ ಹಾಸನ, ಮಹಿಷನಿಂದ ಮೈಸೂರು ಆಗಬೇಕಾದರೆ ನಮ್ಮ ತಾಯಿ ಮಂಗಳಾಂಬಿಕೆಯಿಂದ ಮಂಗಳೂರು ಯಾಕಾಗಬಾರದು….?

ಇಲ್ಲಿ ಸರ್ವಧರ್ಮಿಗಳು ನೆಲೆಸುತ್ತಾರೆ ಹಾಗಾಗಿ ಪುರಾಣ ಪುರಾವೆಗೆ ಅಷ್ಟು ಮಹತ್ವ ನೀಡಬೇಕಾಗಿಲ್ಲ ಅಂತ ನಿಮಗೆ ಅನಿಸಿದರೆ ಅದನ್ನು ಬಿಡೋಣ ಮುಂದೆ ನೋಡೋಣ.. ಉಳ್ಳಾಲದ ವೀರರಾಣಿ ಅಬ್ಬಕ್ಕ ಆಳಿದ ನಾಡು ನಮ್ಮದು. ಅವಳ ಕಾಲದಲ್ಲಿಯೂ ಮಂಗಳೂರು ಮಂಗಳೂರಾಗಿಯೇ ಇತ್ತು, ಮೈಸೂರು ಒಡೆಯರ ಕಾಲದಲ್ಲಿಯೂ ಹೆಸರು ಬದಲಾಗಲಿಲ್ಲ, ಅತಿಕ್ರಮಿಗಳಾದ ಪೋರ್ಚುಗೀಸರು, ಬ್ರಿಟೀಷರು ಬಂದಾಗಲೂ ಮಂಗಳೂರೇ ಆಡಳಿತದ ಕೇಂದ್ರವಾಗಿತ್ತು. ಇಲ್ಲಿ ವಿಪರ್ಯಾಸ ನೋಡಿ ನಾವು ದಾಸ್ಯದಲ್ಲಿ ಇರುವಾಗ ಕೂಡ ನಮ್ಮ ಹೆಸರು, ಅಸ್ತಿತ್ವವನ್ನು ಕಳೆದುಕೊಂಡಿರಲಿಲ್ಲ ಆದರೆ ಸ್ವತಂತ್ರ ಬಂದ ನಂತರ ಏನಾಯ್ತು..? ನೀವೇ ಚಿಂತಿಸಿ.

ಇದನ್ನು ಬದಿಗಿರಿಸಿ ಮಾತಾಡಿ ಅನ್ನುತ್ತೀರಾ…. ಸರಿ ಇದನ್ನೂ ಸ್ವಲ್ಪ ಹೊತ್ತು ಪಕ್ಕಕ್ಕೆ ಇರಿಸುವ. ಮುಂದಕ್ಕೆ ಭಾಷಾವಾರು ಪ್ರಾಂತ್ಯ ವಿಂಗಡಣೆಯ ಹೊತ್ತು ನಮಗೆ ಮನಸ್ಸು ಮಾಡಿದಿದ್ದರೆ ತುಳು ರಾಜ್ಯವೇ ಸಿಗುತ್ತಿತ್ತು ಆದರೆ ಆ ಅದೃಷ್ಟ ನಮಗಿರಲಿಲ್ಲ ಬಿಡಿ, ನಾವು ಕರ್ನಾಟಕಕ್ಕೆ ಸೇರಿ ಹೋದೆವು. ತುಳು ಚಳುವಳಿ ನೇತಾರ ಎಸ್. ಯು. ಪಣಿಯಾಡಿಯವರು ಆಗಿನ ಈ ತುಳು ಪ್ರಾಂತ್ಯಕ್ಕೆ ತುಳುನಾಡು ಜಿಲ್ಲೆ ಎಂಬ ಹೆಸರು ಇಡಬೇಕೆಂದು ಇಚ್ಛಿಸಿದರು. ಆದರೆ ಉಳಿದವರ ಅಭಿಪ್ರಾಯ ಇದ್ದದ್ದು ಮಾತ್ರ ಮಂಗಳೂರು ಜಿಲ್ಲೆಯೇ ಸೂಕ್ತ ಎನ್ನುವುದಾಗಿತ್ತು. ಕಾರಣ ಆ ಸಮಯದಲ್ಲಿ ತುಳು ಪ್ರಾಂತ್ಯಗಳು ವಿಂಗಡಣೆಯಾಗಿ ಎರಡು ರಾಜ್ಯದಲ್ಲಿ ಹಂಚಿಹೋಗಿ ತುಳುನಾಡು ನಾಡಗಿ ಉಳಿದಿರಲಿಲ್ಲ. ಆದರೆ ಅಲ್ಲಿ ಆದದ್ದೇ ಬೇರೆ, ಹೊಸದಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಎಂಬ ಹೊಸ ನಾಮಧೇಯ ಸೃಷ್ಟಿಯಾಯಿತು. ಇಲ್ಲಿ ತುಳುವರು ಗಮನಿಸ ಬೇಕಾದ ಅಂಶ ನಾವು ನಮ್ಮ ಅಸ್ತಿತ್ವ ಕಳೆದುಕೊಂಡದ್ದು ಎಲ್ಲಿ ಅನ್ನುವುದು.

ಈಗ ಕೆಲವರು ಕೇಳ್ಬಹುದು “ಅಲ್ಲಿ ಮಂಗಳದೇವಿಯೂ ಇದ್ದಾಳೆ, ಮಂಗಳೂರು ಕೂಡ ಇದೆ. ಮತ್ತೆ ಯಾಕ್ರಿ ಇಷ್ಟು ಗೋಳಾಡ್ತೀರ” ಅಂತ. ತುಳುವರೇ… ನೀವು ಸ್ವಲ್ಪ ಕಿವಿಕೊಟ್ಟು ಕೇಳಿ ಭಾಷಾವಾರು ಪ್ರಾಂತ್ಯ ರಚನೆಯಾಗುವವರೆಗೆ ಮಂಗಳೂರು ರಾಜಾಡಳಿತದ ಮುಖ್ಯ ಕೇಂದ್ರವಾಗಿತ್ತು. ಶಾಸನಬದ್ದ ಪ್ರಮುಖ ನಿರ್ಣಯ, ನಿರ್ಧಾರದ ಭಾಗವಾಗಿತ್ತು, ಇಂದು ಮಂಗಳೂರು ಮುಂದುವರಿದ ಪ್ರಮುಖನಗರಗಳಲ್ಲಿ ಒಂದು ಅನ್ನುವುದಾದರೆ ಅದು ಒಂದು ಕಾಲದಲ್ಲಿ ರಾಜರ ರಾಜಧಾನಿಯಾಗಿತ್ತು ಎನ್ನುವ ಕಾರಣಕ್ಕಾಗಿ ಅನ್ನುವುದನ್ನು ನಾವು ಯಾವತ್ತೂ ಮರೆಯಬಾರದು. ಈಗಿನ ಮಂಗಳೂರು ಕೇವಲ ಒಂದು ತಾಲೂಕು. ಆಗಿನ ರಾಜಬೀದಿ ಈಗಿನ ಸಾಮಾನ್ಯ ರಸ್ತೆ. ಉಳಿದ ತಾಲೂಕುಗಳಂತೆ ಮಂಗಳೂರು ಕೂಡ ಸಾಮಾನ್ಯ ಅಷ್ಟೇ. ಇದು ಉನ್ನತಿ ಖಂಡಿತಾ ಅಲ್ಲ. ನಮ್ಮ ಜಿಲ್ಲೆಗೆ ಮಂಗಳೂರು ಹೆಸರು ಸೂಕ್ತವಾಗಿತ್ತು ಆದರೆ ದೂರ ದೂರಕ್ಕೂ ಸಂಬಂಧವೇ ಇಲ್ಲದ ದಕ್ಷಿಣ ಕನ್ನಡ ಅನ್ನುವ ಹೆಸರನ್ನು ಇಟ್ಟು ಬಿಟ್ಟರು. ಮಂಗಳೂರನ್ನು ಸಾಮಾನ್ಯದಲ್ಲಿ ಅತಿಸಾಮಾನ್ಯ ಸ್ಥಿತಿಗೆ ತಳ್ಳಿಬಿಟ್ಟರು.

ತುಳುವರಿಗೆ ದೊಡ್ಡ ಪೆಟ್ಟು ಕೊಟ್ಟದ್ದು ಭಾಷಾವಾರು ಪ್ರಾಂತ್ಯ ರಚನೆಯ ನಂತರ ನಡೆದ ಕನ್ನಡೀಕರಣ. ತುಳುವ ಮೂಲದ ಕೋಡಿ, ಸುಲ್ತಾನರ ಕಿನಾರೆಯಾಗಿ ನಂತರದಲ್ಲಿ ಬ್ರಿಟೀಷರ ಕೆನರಾ ಆಯ್ತು ಆದರೆ ಇದಕ್ಕೆ ಸರಿಯಾದ ಅರ್ಥವೇ ಇಲ್ಲ. ಮದ್ರಾಸ್ ಪ್ರೆಸಿಡೆನ್ಸಿಯ ದಕ್ಷಿಣ ಭಾಗವನ್ನು ಸೌತ್ ಕೆನರಾ ಅಂತ ಕರೆದು, ಮಂಗಳೂರನ್ನು ಕೇಂದ್ರವನ್ನಾಗಿ ಮಾಡಿ ಆಡಳಿತ ಮಾಡಿದರು ಬ್ರಿಟೀಷರು. ಆದರೆ ಭಾಷಾವಾರು ಪ್ರಾಂತ್ಯ ರಚನೆಯ ಸಮಯದಲ್ಲಿ ನಮ್ಮ ಭಾಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾಯಿತು. ಇಲ್ಲಿ ಆಶ್ಚರ್ಯ ಅಂದ್ರೆ ನಾವು ಕರ್ನಾಟಕದ ದಕ್ಷಿಣದಲ್ಲೂ ಇಲ್ಲ ಅಲ್ಲದೆ ಈ ಹೆಸರನ್ನು ಕೊಟ್ಟಾಗ ಕನ್ನಡವನ್ನು ಕೆಲವೇ ಕೆಲವು ಮಂದಿ ಇಲ್ಲಿ ಮಾತಾನಾಡುತ್ತಿದ್ದರಷ್ಟೇ. ಈಗಿನ ಮಂಗಳೂರಿನ ಹಾದಿಬೀದಿಗಳಲ್ಲಿ ಕನ್ನಡಿಗರು, ಹಿಂದಿ ಭಾಷಿಗರು ಮತ್ತು ಮಳಿಯಾಲಿ ಭಾಷಿಗರು ಅತೀ ಹೆಚ್ಚಾಗಿ ಕಾಣಸಿಗುತ್ತಾರೆ. ಅವರು ನಮ್ಮ ಅರ್ಥ ವ್ಯವಸ್ಥೆಯ ಪ್ರಮುಖ ಭಾಗ ಅವರಿಗೆ ನಾವು ಗೌರವವನ್ನು ನೀಡುತ್ತೇವೆ ಹಾಗಾಗಿ ಅವರು ನಮ್ಮಲ್ಲಿ ಒಂದಾಗಿದ್ದಾರೆ. ಆದರೆ ಆಗಿನ ಕಾಲದಲ್ಲಿ ಸುಮಾರು 50% ತುಳು ಭಾಷೆ ಉಳಿದಂತೆ ಬ್ಯಾರಿ, ಕೊಂಕಣಿ, ಕನ್ನಡ, ಮರಾಠಿ, ಮಳಿಯಾಲಿ, ಗುಜರಾತಿ ಮಾತಾಡುವ ಜನರು ಇಲ್ಲಿದ್ದರು. ಮೊದಲಾಗಿ ನಮ್ಮ ಭಾಗಕ್ಕೆ ದಕ್ಷಿಣ ಕನ್ನಡ ಅಂತ ಹೆಸರಿಸುವ ಅಗತ್ಯವೇ ಇರಲಿಲ್ಲ ಅದರ ಮೇಲೆ ಕೆಲವೇ ಕೆಲವು ಮಂದಿ ಮಾತಾನಾಡುತ್ತಿದ್ದ ಭಾಷೆಯನ್ನು ಪ್ರಮುಖ ಅಂತ ಬಿಂಬಿಸುವ ಕೆಲಸ ನಡೆದು ಹೋಯಿತು. ಈ ಕನ್ನಡೀಕರಣದ ಪ್ರಭಾವ ಎಷ್ಟಾಯಿತು ಎಂದರೆ ಜಿಲ್ಲೆ ಮಾತ್ರ ಅಲ್ಲ ಊರು, ಹಳ್ಳಿ ಮನೆಗಳನ್ನೂ ಸಹ ಬಿಡಲಲ್ಲಿ. ಪದವು, ಕೋಡಿ, ಕೈಕಂಬ, ಕೊಲ್ಯ, ಪಾಡಿ.. ಇತ್ಯಾದಿ ತುಳು ಊರುಗಳ ಹೆಸರುಗಳು ಆ ಪ್ರದೇಶದ ಪ್ರಾಕೃತಿಕ ಗುಣಲಕ್ಷಣಗಳಿಗೆ ಹೊಂದಿಕೊಂಡಿರುತ್ತದೆ. ಆದರೆ ಕನ್ನಡೀಕರಣಗೊಂಡಾಗ ತನ್ನ ಅಸ್ತಿತ್ವ ಕಳೆದುಕೊಂಡಿತು. ಉದಾಹರಣೆಗೆ ನಮ್ಮದೇ ಹಳ್ಳಿ ತೆಲಾರ್. ತುಳುನಾಡಿನ ವೀರ ಪುರುಷ ಖ್ಯಾತಿಯ ಅಂಗೋಳಿ ಮಂಜಣ್ಣ ತೆಲಾರ್ ಗುತ್ತಿನವರು, ನಮ್ಮ ಹಳ್ಳಿಯವರು. ತೆಲಾರ್ ಅಥವಾ ತೆಲ್ಲಾರ್ ಅಂದರೆ ನೀರ ಬದುವಿನಲ್ಲಿರುವ ಪ್ರದೇಶ. ಇಲ್ಲಿ ಇನ್ನೊಂದು ಗಮನಿಸಬಹುದು ನಾವು ನೀರು ದೋಸೆಗ್ ತುಳುವಿನಲ್ಲಿ ತೆಲ್ಲಾವು ಅಂತ ಹೇಳುತ್ತೇವೆ. ತೆಲಾರ್ ನೈಸರ್ಗಿಕವಾಗಿ ಅತ್ಯಾಕರ್ಷಕವಾದ ಪ್ರದೇಶ ಅದರ ಕನ್ನಡೀಕರಣ ಗೊಂಡ ಹೆಸರು ಚೇಳ್ಯಾರು ಇದರ ಅರ್ಥ ಕೇಳಿದರೆ ನಮ್ಮ ಹಳ್ಳಿಯ ಯಾರಿಗೂ ಗೊತ್ತಿರಲಿಕ್ಕಿಲ್ಲ. ಹಾಗೆ ಎಷ್ಟೋ ಹೆಸರುಗಳು ಎದ್ವಾತದ್ವ ಹುಟ್ಟಿಕೊಂಡವು. ಆದರೂ ಕಣ್ಣುಮುಚ್ಚಿ ಎಲ್ಲವನ್ನೂ ಅಪ್ಪಿಕೊಂಡೆವು. ಎಲ್ಲಾ ಹೇರಿಕೆಗಳನ್ನು ಸಹಿಸಿಕೊಂಡೆವು. ಆದರೆ ಅಸ್ತಿತ್ವ ಕಳೆದುಕೊಂಡು ಇನ್ನೆಷ್ಟು ದಿವಸ ಬದುಕುವುದು.

ನಮ್ಮ ಜಿಲ್ಲೆಯ ಹೆಸರು ದಕ್ಷಿಣಕನ್ನಡ ಆದರೂ ಅದರ ಬಳಕೆ ಬಹಳ ಕಮ್ಮಿ. ಹೆಚ್ಚಾಗಿ ಎಲ್ಲರೂ ನಮ್ಮ ಜಿಲ್ಲೆಯನ್ನು ಮಂಗಳೂರು ಎಂದೇ ಗುರುತಿಸುವುದು. ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ, ಮಂಗಳೂರು ಬಂದರು, ಮಂಗಳೂರು ಆಕಾಶವಾಣಿ, ಮಂಗಳೂರು ವಿಮಾನ ನಿಲ್ದಾಣ, ಮಂಗಳೂರು ಯೂನಿವರ್ಸಿಟಿ, ಮಂಗಳೂರು ರೈಲ್ವೆ ನಿಲ್ದಾಣ, ಎಂ. ಸಿ. ಎಫ್, ಎಂ.ಆರ್.ಪಿ.ಎಲ್ ಎಲ್ಲವೂ ಮಂಗಳೂರು ಹೆಸರನ್ನೇ ಪ್ರತಿನಿಧಿಸುವಂತದ್ದು. ನಾವು ಈಗ ಬೇಡಿಕೆ ಇಟ್ಟಿರುವುದು ಹೊಸತಾಗಿ ಕೊಡಿ ಅನ್ನುವುದಕ್ಕಲ್ಲ ನೀವು ಕೊಟ್ಟಿರುವ ಹೆಸರು ನಮಗೆ ಬೇಡ, ಹಿಂದಿನ ಹೆಸರೇ ಸಾಕು ಎನ್ನುವ ಕಾರಣಕ್ಕಾಗಿ.

ರಾಮನಗರ ಬೆಂಗಳೂರು ದಕ್ಷಿಣ ಆಗುವಾಗ ನೋವಾಗಲಿಲ್ಲ, ಕೇರಳ ಕೇರಳಮ್ ಆಗುವಾಗ ನೋವಾಗಲಿಲ್ಲ ಈಗ ನಾವು ನಮ್ಮದೇ ಹೆಸರು ಬೇಕು ಅಂದಾಗಲೂ ಯಾರಿಗೂ ನೋವಾಗಬಾರದು. ಅದು ಅಲ್ಲದೆ ಮಂಗಳೂರು ಬೆಂಗಳೂರಿನಂತೆ ಸ್ವಚ್ಛವಾದ ಕನ್ನಡ ಉಚ್ಚಾರವನ್ನೂ ಕೂಡ ಹೊಂದಿದೆ ಹಾಗಾಗಿ ದಕ್ಷಿಣ ಕನ್ನಡ ಮಂಗಳೂರಾದರೆ ಯಾರು ಬೇಸರಿಸಬಾರದು. ಆದರೆ ಕೆಲವರಿಗೆ ನಮ್ಮ ಜಿಲ್ಲೆಯ ಹೆಸರು ಕುಡ್ಲ ಅಥವಾ ತುಳುನಾಡು ಆಗ್ಬೇಕು ಅನ್ನುವ ಮನಸ್ಸಿದೆ ಇದು ಸರಿಯಾದ ಆಯ್ಕೆಗಳಲ್ಲ. ಯಾಕೆಂದರೆ ತುಳುನಾಡು ಅಂದರೆ ಅದು ಅತಿ ವಿಸ್ತಾರವಾದ ಪ್ರದೇಶ. ಜಿಲ್ಲೆ ಮತ್ತು ನಾಡಿನ ವ್ಯಾಪ್ತಿಗೆ ಅಗಾಧವಾದ ಭಿನ್ನತೆಯಿದೆ. ತುಳು ಭಾಷಿಗರು ಈ ಜಿಲ್ಲೆಯಲ್ಲಿ ಮಾತ್ರ ಅಲ್ಲ ಉಡುಪಿ, ಕೊಡಗು, ಕೇರಳ, ಶಿವಮೊಗ್ಗ, ಚಿಕ್ಕಮಗಳೂರು ಇಲ್ಲಿ ಕೂಡ ಇದ್ದಾರೆ ಹಾಗಾಗಿ ಒಂದು ಜಿಲ್ಲೆಗೆ ತುಳುನಾಡು ಎಂದು ಹೆಸರಿಟ್ಟು ಅದರ ಅಗಾಧತೆಗೆ ಕಡಿವಾಣ ಹಾಕಬಾರದು. ಇನ್ನು ಕುಡ್ಲ ಇದು ತಾಲೂಕು ಆಗಬಹುದು ಆದರೆ ಜಿಲ್ಲೆ ಆಗಲಾರದು ಕಾರಣ ಕುಡ್ಲ ಅಂದರೆ ನದಿಗಳು ಸೇರುವ ಪ್ರದೇಶ ಎನ್ನುವ ಹಾಗೆ ಅರ್ಥವನ್ನು ನೀಡುತ್ತದೆ. ಮಂಗಳೂರು ತಾಲೂಕಿಗೆ ಕುಡ್ಲ ಅನ್ನಬಹುದು ಆದರೆ ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಕಾರಾವಳಿ ಜಿಲ್ಲೆ ಎಂದು ಹೇಳಿದರೂ ಪುತ್ತೂರು, ಸುಳ್ಯ,..ಇತ್ಯಾದಿ ಭಾಗಗಳು ಕರಾವಳಿ ಅಲ್ಲ. ಹಾಗಾಗಿ ನಮ್ಮ ಹಿಂದಿನ ಮಂಗಳೂರೇ ಸರಿಯಾದ ಆಯ್ಕೆ. ಅದೇ ನಮ್ಮ ಜಿಲ್ಲೆಗೆ ಸೂಕ್ತ ಹೆಸರು ಈಗಿನ ನವಕಾಲಕ್ಕೆ ಬ್ರ್ಯಾಂಡ್ ಹೆಸರು ಕೂಡ ಹೌದು.

ಮಂಗಳೂರು ಹೆಸರಿಗಾಗಿ ಹೋರಾಟ ಅಗತ್ಯವೇ..? ಎಲ್ಲರಿಗೂ ಅನಿಸಬಹುದು. ಸ್ವಾಯತ್ತತ್ತೆ, ಅಸ್ಮಿತೆ, ಅಸ್ತಿತ್ವಕ್ಕಾಗಿ ಹೋರಾಟ ತಪ್ಪಲ್ಲ. ಇಲ್ಲಿ ಇನ್ನೊಂದು ಗಮನಿಸಬೇಕಾದದ್ದು ಯಾವ ಕನ್ನಡಪರ ಹೋರಾಟಗಾರರಾಗಲಿ, ಪ್ರಗತಿಪರ ಚಿಂತಕರಾಗಲಿ ಸುಮಾರು 50% ರಷ್ಟು ಜನರು ಕನ್ನಡ ಮಾತಾಡುವ ಭಾಗಗಳು ಕರ್ನಾಟಕದಲ್ಲಿ ಇದ್ದರೂ ಕೂಡ ಆ ಭಾಗಕ್ಕೆ ಹೆಸರು ದಕ್ಷಿಣ, ಉತ್ತರ, ಪೂರ್ವ,ಪಶ್ಮಿಮ, ಈಶಾನ್ಯ, ನೈಋತ್ಯ, ವಾಯುವ್ಯ, ಆಗ್ನೇಯ ಕನ್ನಡ ಇಡಿ ಅಂತ ಕೇಳ್ತಾ ಇಲ್ಲ ಆದರೆ ಸಪ್ತ ಭಾಷಾ ಸಂಗಮ ಸ್ಥಳ ಮಾತ್ರ ದಕ್ಷಿಣ ಕನ್ನಡವೇ ಆಗಬೇಕು ಅನ್ನುವ ಪಟ್ಟು. ಹಿಂದಿನಿಂದಲೂ ಕಾಣುವ ಸತ್ಯ ಅಂದ್ರೆ ತುಳುವರಲ್ಲಿ ಹೋರಾಟದ ಛಲ ಇಲ್ಲ, ಆ ಕಿಡಿ ಇನ್ನೂ ಹುಟ್ಟಿಲ್ಲ. ನಾವು ಸಿಕ್ಕಿಂ ರಾಜ್ಯವನ್ನು ನೋಡಿ ಕಲಿಯಬೇಕು. ಸಿಕ್ಕಿಂನ ಭೌಗೋಳಿಕ ವಿಸ್ತೀರ್ಣ 7,096 ಚದರ ಕಿಲೋಮೀಟರ್ ಮಾತ್ರ. ನಮ್ಮ ಎರಡು ಜಿಲ್ಲೆಯ ವಿಸ್ತೀರ್ಣ ಸಿಕ್ಕಿಂಗಿಂತ ಜಾಸ್ತಿ ಇದೆ. ಅಲ್ಲಿ 13 ಭಾಷೆಗಳು ರಾಜ್ಯದ ಅಧಿಕೃತ ಭಾಷೆಗಳು. ಕೆಲವೇ ಕೆಲವು ಸಾವಿರ ಮಂದಿ ಮಾತಾನಾಡುವ ಬೋಡೋ, ಡೋಗ್ರಿ, ಮೈಥಿಲಿ ಮತ್ತು ಸಂತಾಳಿ ಭಾಷೆಗಳನ್ನು 2003ರಲ್ಲಿ ನಡೆದ 92ನೇ ಸಂವಿಧಾನ ತಿದ್ದುಪಡಿ ಕಾಯ್ದೆಯಡಿ 8ನೇ ಪರಿಚ್ಛೇಧಕ್ಕೆ ಸೇರಿಸಲಾಯಿತು. ಕಾರಣ ಅವರ ಸಂಖ್ಯೆ ಕೇವಲ ಸಾವಿರದ್ದು ಆದರೂ ಅವರಲ್ಲಿ ರಾಜ್ಯ ಕೇಳುವಷ್ಟು, ಅದಕ್ಕಾಗಿ ಬಲಿದಾನ ನೀಡುವಷ್ಟು ಭಾಷಾಭಿಮಾನ ಇತ್ತು. ಆದರೆ ನಮಗೆ ಪಂಚದ್ರಾವಿಡ ಭಾಷೆಯಲ್ಲಿ ಒಂದಾದ ನಮ್ಮ ತುಳುವಿಗೆ ಯೋಗ್ಯ ಸ್ಥಾನಮಾನ ನೀಡಬೇಕೆನ್ನುವ ಕಿಚ್ಚು ಇಲ್ಲ. ನಮ್ಮ ಅಸ್ತಿತ್ವವನ್ನು ಹಿಂಪಡೆಯಬೇಕೆಂಬ ಉತ್ಸಾಹ ಇಲ್ಲ. ಯಾಕೆಂದರೆ ನಾವು ತುಳುವರು ‘ತುಳುವ ಪೆಲಕಾಯಿದಲೆಕ ಮೆತ್ತನೆ’. ಒಮ್ಮೆ ಇಂತಹ ಎಲ್ಲಾ ಭಾವಗಳನ್ನು ಬದಿಗಿರಿಸಿ ಹೊರಬಂದು ಕಣ್ಣು ಬಿಟ್ಟು ನೋಡಿದರೆ, ಕಿವಿಗೊಟ್ಟು ಕೇಳಿದರೆ ಗೊತ್ತಾಗ ಬಹುದೇನು ಈಗಿನ ತುಳುನಾಡಿನ ಸ್ಥಿತಿಗತಿ. ಕೊನೆಯದಾಗಿ ಹೇಳುವುದಾದರೆ ನಮಗೆ ಎಲ್ಲರೂ ಬೇಕು ಆದರೆ ನಮ್ಮ ಅಸ್ತಿತ್ವ ಮರುಸ್ಥಾಪನೆಯಾಗಬೇಕು. ಅದಕ್ಕಾಗಿ ತುಳು ಆಡಳಿತ ಭಾಷೆ ಮಾತ್ರ ಅಲ್ಲ ರಾಜ್ಯದ ಅಧಿಕೃತ ಭಾಷೆಯಾಗಬೇಕು, ನಮ್ಮ ಜಿಲ್ಲೆಯ ಹೆಸರು ಮೂಲ ಮಂಗಳೂರೇ ಆಗಬೇಕು, ಪಂಚ ದ್ರಾವಿಡ ಭಾಷೆ ತುಳು 8ನೇ ಪರಿಚ್ಛೇದಕ್ಕೆ ಸೇರಬೇಕು. ತುಳು ಭಾಷಾಭಿವೃದ್ಧಿ ಪ್ರಾಧಿಕಾರ ಆಗಬೇಕು, ತುಳು ಲಿಪಿಗೆ ಯುನಿಕೋಡ್ ಆಗಬೇಕು, ಇದು ನಮ್ಮ ಮುಂದಿನ ಹೋರಾಟದ ಹೆಜ್ಜೆಗಳು. ಹೋರಾಟ ಬೇಕು ಏಕೆಂದರೆ ಅಸ್ತಿತ್ವ ಕಳೆದುಕೊಂಡು ಬದುಕಲಾಗುವುದಿಲ್ಲ.

Leave a Reply

Your email address will not be published. Required fields are marked *