
✍️ ಅಂಜಲಿ ಶ್ರೀನಿವಾಸ್ ಖಟವಟೆ
ಹುಬ್ಬಳ್ಳಿ
ಇತ್ತೀಚಿನ ವರ್ಷಗಳಲ್ಲಿ ಸಮಾಜ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ತೀವ್ರ ಚರ್ಚೆಗೆ ಒಳಗಾಗಿರುವ ಒಂದು ಗಂಭೀರ ವಿಷಯವಾಗಿದೆ. ಮಹಿಳೆಯರನ್ನು ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಪೀಡನೆ ಮತ್ತು ಲೈಂಗಿಕ ಶೋಷಣೆಯಿಂದ ರಕ್ಷಿಸಲು ಸರ್ಕಾರವು ಹಲವು ಕಠಿಣ ಕಾನೂನುಗಳನ್ನು ಜಾರಿಗೆ ತಂದಿದೆ. ಆದರೆ, ಕೆಲವು ಸಂದರ್ಭಗಳಲ್ಲಿ ಈ ಕಾನೂನುಗಳು ವೈಯಕ್ತಿಕ ದ್ವೇಷ, ಹಣದ ಬೇಡಿಕೆ ಅಥವಾ ಕುಟುಂಬದವರನ್ನು ಸಿಲುಕಿಸುವ ಉದ್ದೇಶಗಳಿಗಾಗಿ ದುರುಪಯೋಗವಾಗುತ್ತಿರುವುದು ಕಂಡುಬರುತ್ತಿದೆ. ಹೆಣ್ಣಿನ ಮೇಲೆ ದೌರ್ಜನ್ಯ ಯಾರಿಗೂ ಹೇಳಲಾಗದೆ ಸಹಿಸಿಕೊಂಡು ಕೆಲಸದ ಸ್ಥಳ ಅಥವಾ ಗೃಹ ಹಿಂಸೆಗೆ ಒಳಗಾಗಿ ಬದುಕು ಸಾಗಿಸುತ್ತಿರುವ ಹೆಣ್ಣುಮಕ್ಕಳಿಗೆ ವರದಾನವಾದ ಕಾನೂನು ಕಾಯ್ದೆಗಳಿವೆ ಆದರೆ ಇತ್ತೀಚಿಗೆ ವರ್ಷಗಳಲ್ಲಿ ಈ ಕಾನೂನಿನ ದುರುಪಯೋಗವಾಗುತ್ತಿದೆ. ಪತಿ ಪತ್ನಿಯ ಸಣ್ಣ ಪುಟ್ಟ ಮನಸ್ತಾಪ ಕುಟುಂಬದವರ ಜೊತೆ ಕಲಹ ಹೊಂದಾಣಿಕೆಯ ಅಭಾವ ಆಸ್ತಿ ವಿವಾದ ವಿಚ್ಚೆದನಕ್ಕಾಗಿ ಹೆಚ್ಚು ಹಣದ ಬೇಡಿಕೆ ಇಡುವ ಸಲುವಾಗಿ ವರದಕ್ಷಿಣೆ ಕಿರುಕುಳ ಆರೋಪಿಸಿ ಕುಟುಂಬದವರ ಹಾಗೂ ಸಂಬಂಧಿಕರನ್ನು ಬಂಧನಕ್ಕೋಳಗಾಗಿಸಿ ಮನೆಯವರಿಗೆ ಪಾಠ ಕಲಿಸುವ ಉದ್ದೇಶದಿಂದ ಗುರಾಣಿಯಂತಿರಬೇಕಾದ ಕಾನೂನು ಕತ್ತಿಯಂತೆ ಉಪಯೋಗಿಸುವುದು ತಪ್ಪು. ಪ್ರೀತಿಸಿ ಸುತ್ತಾಡಿ ಬೇಡವಾದಾಗ ಬ್ಲಾಕ್ ಮೇಲ್ ಅತ್ಯಾಚಾರದ ಆರೋಪವಹಿಸುವುದು ಅಥವಾ ಪ್ರೀತಿಸಿ ಮದುವೆಯಾದ ಹುಡುಗ ಎ. ಟಿ. ಎಮ್ ನಂತೆ ಹಣ ಕೊಡಬೇಕು ಎ ಐ ನಂತೆ ಜೊತೆ ಇರಬೇಕು ಅಂದರೆ ಒಬ್ಬ ಮದ್ಯಮ ವರ್ಗದ ಹುಡುಗನಿಗೆ ಸಾಧ್ಯವಾ..? ಹಾಂ ಒಬ್ಬ ಹೆಣ್ಣು ಅನೇಕ ಕನಸುಗಳ ಕಟ್ಟಿಕೊಂಡು ಹೊಸಜೀವನಕ್ಕೆ ಕಾಲಿಡುತ್ತಾಳೆ ನಿಜ ತಾನು ಕಂಡ ಕನಸುಗಳನ್ನು ತಾನೇ ಪೂರ್ಣಗೊಳಿಸುವ ಸಾಮರ್ಥ್ಯವು ಹೊಂದಿರಬೇಕು. ಎಷ್ಟೋ ಜನ ಸಾಮರ್ಥ್ಯವಿದ್ದರೂ ಜವಾಬ್ದಾರಿಗಳ ಮದ್ಯ ಕನಸುಗಳ ಕೈ ಬಿಟ್ಟಿರಬಹುದು.. ಸಮಾಜ ಬಹು ಮುಖಗಳ ಆವರಣ ಭಿನ್ನ ಭಿನ್ನ ಮನಸ್ಥಿತಿಗಳಿವೆ.
ಇಲ್ಲಿ ಹುಡುಗಿ ಆರೋಪಿಸಿದರೆ ನೂರು ಪ್ರತಿಶತ ಹುಡುಗನದೆ ತಪ್ಪು ಎಂದು ಖಚಿತವಾಗಿರುತ್ತಾರೆ. ಇನ್ನು ಕೆಲವರು ನಿಯತ್ತಾಗಿ ಕೆಲಸ ಮಾಡುವ ಹುಡುಗಿಗೆ ಬಡ್ತಿಯಾದರೆ ಬಾಸ್ ಗೆ ಅವಳು ಖಾಸ್ ಎಂಬುವ ಗಾಸಿಪ್ಗಳು.. ಈಗ ಕಾನೂನಿನ ದುರ್ಬಳಕೆ ಬಗ್ಗೆ ಹೇಳುವುದಾದರೆ ಸೊಸೆ ಆರೋಪಿಸಿದ ನಂತರ ಅತ್ತೆ ಮನೆಯವರು ಹೌಹಾರುವರು ಸಾಮಾಜಿಕವಾಗಿ ಮಾನಸಿಕವಾಗಿ ಕುಗ್ಗುವರು. ಮನ ನೊಂದು ಆತ್ಮಹತ್ಯೆಗಳು ನಡೆದಿವೆ.ಈ ಬಗ್ಗೆ ಕಾನೂನು ಸಡಿಲವಾಗಬೇಕು.ಸೂಕ್ತ ತನಿಖೆಯಾಗಬೇಕು.ಆರೋಪಿತರು ನುರಿತ ವಕೀಲರ ಸಂಪರ್ಕಿಸಬೇಕು. ವಿಡಿಯೋ ಇನ್ನಿತರ ಸಾಕ್ಷಿ ಸಂಗ್ರಹಿಸಬೇಕು.ಹುಡುಗಿ ದೂರು ನೀಡಿದ ತಕ್ಷಣ ಕುಲಂಕುಶವಾಗಿ ಪರಿಶೀಲಿಸಬೇಕು.ಆರೋಪ ಸುಳ್ಳು ಎಂದು ಸಾಬೀತಾದರೆ ಮಾನ ನಷ್ಟ ಮೊಕದ್ದಮೆ ಹಾಕಬೇಕು.ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತಿದೆ. ಆದರೆ ಹೆಣ್ಣನ್ನು ಹೆಣ್ಣೇ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂಬ ಮಾತಿದೆ ಅತ್ತೆ ಸೊಸೆ ಮನೆಯ ಆಧಾರ ಸ್ತಂಭ ಆಧುನಿಕ ಅತ್ತೆಯಂದಿರು ಸೊಸೆಯನ್ನು ಮಗಳಂತೆ ನೋಡಿಕೊಳ್ಳುವರು. ಅವಳು ಕ್ಷಮಯಾ ಧರಿತ್ರಿಯು ಹೌದು ಯಾವುದು ಮರೆಯದೆ ಮನಸ್ಸಿನಲ್ಲಿ ಇಟ್ಟುಕೊಳ್ಳುವವಳು ಹೌದು.ಅವಳು ಒಲಿದರೆ ನಾರಿ ಮುನಿದರೆ ಮಾರಿ ಎಂಬ ಮಾತುಗಳು ಪ್ರಚಲಿತದಲ್ಲಿದೆ ಆದರೆ ಆಕೆ ವಿಶಾಲ ದೃಷ್ಟಿಕೋನದಿಂದ ಆಲೋಚನೆ ಮಾಡಬೇಕಾಗಿದೆ.
ಬೆಂಕಿಯನ್ನು ಆರಿಸುವ ಗಾಳಿ ಕೆಂಡನು ಉರಿಸುತ್ತದೆ. ಅಲ್ವಾ .ಮನೆಗೆ ಸಮಾಜಕ್ಕೆ ಶಾಂತವಾಗಿ ಉರಿವ ದೀಪವಾಗಬೇಕು.ದಹಿಸುವ ಬೆಂಕಿಯಾಗಬಾರದು
ಈಗಿನ ಹೆಣ್ಣು ತನ್ನ ಪ್ರಬುದ್ಧ ವಿಚಾರಗಳಿಂದ ಹೆಣ್ಣಿಗೆ ಹೆಣ್ಣೆ ಶತ್ರು ಎಂಬ ಮಾತು ಅಳಿಸಿ ಹಾಕಬಹುದು ಅವಳು ಮನಸ್ಸು ಮಾಡಬೇಕಷ್ಟೆ.ಕಾನೂನಿನ ಕಾಯ್ದೆ ದುರುಪಯೋಗದಿಂದ ನಿಜವಾಗಿ ನೊಂದ ಮಹಿಳೆಯರಿಗೆ ನ್ಯಾಯ ದೊರಕುವುದು ಕಠಿಣವಾಗುವುದು.. ಬೇರೆಯವರ ಬಾಳಿಗೆ ಬೆಂಕಿ ಇಡುವ ಪ್ರಯತ್ನದಲ್ಲಿ ಒಂದು ಕಿಡಿ ಸಾಕು ನಿಮ್ಮ ದಹಿಸಲು ಪ್ರಕೃತಿಯು ನಾವು ಕೊಟ್ಟಿದ್ದನ್ನು ತಿರುಗಿಸಿ ನಮಗೆ ಕೊಡುತ್ತದೆ ಇದೆ ಪ್ರಕೃತಿ ನಿಯಮ. ಕರ್ಮ ಎಂಬುವುದು ಯಾರನ್ನು ಬಿಡುವುದಿಲ್ಲ.
