ಕಾರ್ಕಳ: ರಾಜ್ಯ ಸರ್ಕಾರದ ಗೃಹ ಸಚಿವರಾದ ಸನ್ಮಾನ್ಯ ಪ್ರಿಯಾಂಕ ಖರ್ಗೆ ಅವರು ದಲಿತ ಸಮುದಾಯದ ಹೆಮ್ಮೆಯಾಗಿದ್ದಾರೆ. ಅವರು ಅಧಿಕಾರ ವಹಿಸಿಕೊಂಡಂದೆಂದಿನ ದಿನದಿಂದಲೂ ಅವರ ವಿರುದ್ಧ ಮನಸ್ಕೃತಿ ಆರಾಧಕರಾದ ಬಿಜೆಪಿ ನಾಯಕರುಗಳು ನಿರಂತರ ಅವಹೇಳನಕಾರಿಯಾಗಿ ಟೀಕೆಗಳನ್ನು ಮಾಡುತ್ತಾ ಬಂದಿದ್ದಾರೆ ಎಂದು ಪತ್ರಿಕಾ ಭವನದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ದಲಿತ ಮುಖಂಡ ಅಣ್ಣಪ್ಪ ನಕ್ರೆ ತಿಳಿಸಿದ್ದಾರೆ.

ಬಿಜೆಪಿಯ ಈ ಕೃತ್ಯದಿಂದ ಪ್ರೇರಿತನಾಗಿ ಕಾರ್ಕಳದ ಸುಧೀರ್ ಬಂಗೇರ ಎನ್ನುವ ವ್ಯಕ್ತಿ ನಮ್ಮ ಸಮುದಾಯದ ಪ್ರಿಯಾಂಕ ಖರ್ಗೆ ಅವರ ವಿರುದ್ಧ ಅತ್ಯಂತ ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವುದು ನಮಗೆ ಅತ್ಯಂತ ನೋವುಂಟಾಗಿದ್ದು ಈ ಕುರಿತು ನಾವು ಕಾರ್ಕಳ ಪೋಲಿಸ್ ಠಾಣೆಗೆ ದೂರನ್ನು ದಾಖಲಿಸಿರುತ್ತೇವೆ ಎಂದು ಅಣ್ಣಪ್ಪ ನಕ್ರೆ ತಿಳಿಸಿದ್ದಾರೆ.
ದೂರನ್ನು ಸ್ವೀಕರಿಸಿ ಕಾನೂನು ಕ್ರಮ ಕೈಗೊಂಡ ಪೊಲೀಸ್ ಇಲಾಖೆಗೆ ದಲಿತ ಸಮುದಾಯದ ಪರವಾಗಿ ಧನ್ಯವಾದಗಳನ್ನು ಸಮರ್ಪಿಸುತ್ತೇವೆ ಎಂದು ಅಣ್ಣಪ್ಪ ನಕ್ರೆ ತಿಳಿಸಿದರು.
ಈ ಪ್ರಕರಣದಲ್ಲಿ ಆರೋಪಿಯ ಬಂಧನದ ಬಳಿಕ ಕಾರ್ಕಳ ಬಿಜೆಪಿಯ ವರ್ತನೆಯು ಅತ್ಯಂತ ಆಘಾತಕಾರಿಯಾಗಿದೆ.
ದಲಿತ ಸಮುದಾಯವನ್ನು ಎಂಜಲು ತಿನ್ನುವವರು, ನಿಮ್ಮನ್ನು ಮುಗಿಸುತ್ತೇವೆ ಎಂದು ಜಾತಿ ನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿದ ಆರೋಪಿಯ ಕೃತ್ಯವನ್ನು ಬಿಜೆಪಿ ನಾಯಕರುಗಳು ಖಂಡಿಸುವ ಬದಲಾಗಿ ಸಮರ್ಥನೆಯನ್ನು ಮಾಡಿರುವುದು ಇದು ಬಿಜೆಪಿಯ ದಲಿತ ವಿರೋದಿ ನೀತಿಯಾಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ಮಂಡಲಾ ಅಧ್ಯಕ್ಷರು ದಲಿತ ನಿಂದನೆಯ ಕೃತ್ಯ ನಡೆಸಿದ ಆರೋಪಿಯನ್ನು ಸಮರ್ಥಿಸಿರುವುದು ಬಿಜೆಪಿಗೆ ದಲಿತರ ಮತ ಬೇಡವೇ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಅಣ್ಣಪ್ಪ ನಕ್ರೆ ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ನ್ಯಾಯವಾದಿ ರಾಘವ, ಪ್ರತಿಮಾ ರಾಣಿ, ಶ್ರೀಧರ್ ಬೈಲೂರು, ದೇವದಾಸ್ ದುರ್ಗ ಉಪಸ್ಥಿತರಿದ್ದರು.
