ಮೂಡುಬಿದಿರೆ, ಜೂನ್ 19: ಇಂದು ಶುಕ್ರವಾರ ಶ್ರುತ ಪಂಚಮಿ ನಿಮಿತ್ತ, ಏಕೈಕ ಮೂಲ ಪ್ರತಿಲಿಪಿಗಳ ಸಂರಕ್ಷಣಾ ಕೇಂದ್ರವೆಂದು ಪ್ರಸಿದ್ಧವಾಗಿರುವ ಜೈನ ಕಾಶಿ ಮೂಡುಬಿದಿರೆಯ ಶ್ರೀ ಜೈನ ಮಠದಲ್ಲಿ ಶ್ರುತ ಸ್ಕಂದ ಆರಾಧನೆ ಶ್ರದ್ಧಾ-ಭಕ್ತಿಯಿಂದ ನೆರವೇರಿಸಲಾಯಿತು.



ಬೆಳಿಗ್ಗೆ 8.30 ಗಂಟೆಯಿಂದ ಭಗವಾನ್ ಪಾರ್ಶ್ವನಾಥ ಸ್ವಾಮಿ, ಸರಸ್ವತಿ, ಜಿನವಾಣಿ, ದ್ವಾದಶಾಂಗ ಜಿನವಾಣಿ ಹಾಗೂ ಗಣಧರ ಪೂಜೆಗಳೊಂದಿಗೆ ಅಭಿಷೇಕ ಆರಾಧನೆ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮವು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರ ಮಾರ್ಗದರ್ಶನ ಮತ್ತು ಸಾನ್ನಿಧ್ಯದಲ್ಲಿ ನೆರವೇರಿತು.
ಎಕ್ಸಲೆಂಟ್ ಕಾಲೇಜಿನ ಅಧ್ಯಕ್ಷ ಯುವರಾಜ್ ಜೈನ್ ಹಾಗೂ ರಶ್ಮಿತಾ ಜೈನ್ ದಂಪತಿ ವಿಶೇಷ ಪೂಜಾ ಸೇವೆಯನ್ನು ನೆರವೇರಿಸಿದರು. ಪೂಜೆಯ ಬಳಿಕ ಮಹಾಸ್ವಾಮೀಜಿಯವರು ದಂಪತಿಗಳಿಗೆ ಶಾಲು ಹೊದಿಸಿ, ಶ್ರೀಫಲ ನೀಡಿ ಆಶೀರ್ವದಿಸಿದರು.
ಗುರುಗಳ ಪಾದಪೂಜೆಯ ನಂತರ ಆಶೀರ್ವಚನ ನೀಡಿದ ಮಹಾಸ್ವಾಮೀಜಿಯವರು, ಜೈನ ಧರ್ಮದ ಪರಮ ಪವಿತ್ರ ವೇದಗಳೆಂದೇ ಪರಿಗಣಿಸಲ್ಪಡುವ ಷಟ್ಖಂಡಾಗಮ, ಧವಲ ಹಾಗೂ ತ್ರಯ ಗ್ರಂಥಗಳು ಲಿಪಿಬದ್ಧಗೊಂಡ ಮಹತ್ವದ ದಿನವೇ ಶ್ರುತ ಪಂಚಮಿ ಎಂದು ತಿಳಿಸಿದರು. ಜಿನೇಂದ್ರ ಭಗವಂತರು, ಗಣಧರರು, ಶ್ರುತಧರರು ಹಾಗೂ ಪಟ್ಟಾವಳಿ ಆಚಾರ್ಯರಿಗೆ ಕೃತಜ್ಞತೆ ಸಲ್ಲಿಸುವ ದಿನ ಇದಾಗಿದ್ದು, ಪುರುಷಾರ್ಥ ಚತುಷ್ಟಯ ಸಾಧನೆಗೆ ಸರಿಯಾದ ಜ್ಞಾನ ಅತ್ಯಗತ್ಯ ಎಂದು ಹೇಳಿದರು.
ಸ್ಮೃತಿಯಿಂದ ಅಕ್ಷರ ರೂಪಕ್ಕೆ ಬಂದ ಆಗಮ ಹಾಗೂ ಶಾಸ್ತ್ರಗ್ರಂಥಗಳನ್ನು ಓದಿ, ಅರ್ಥೈಸಿ, ಆಚರಿಸುವವರ ಜೀವನ ಪಾವನವಾಗುತ್ತದೆ ಎಂದು ಮಹಾಸ್ವಾಮೀಜಿಯವರು ತಮ್ಮ ಸಂದೇಶದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಅರಮನೆ ವೃಂದಾ ರಾಜೇಂದ್ರ, ವೀಣಾ ರಘುಚಂದ್ರ, ಮಂಜುಳಾ ಅಭಯಚಂದ್ರ, ಸುಧಾ ಪೃಥ್ವಿರಾಜ್, ಶಂಭವ ಕುಮಾರ್, ವಕೀಲ ಬಾಹುಬಲಿ ಪ್ರಸಾದ್, ರಂಜನ್ ಪೊವಣಿ, ರಾಜೇಶ್ವರಿ, ಸಂಶೋಧಕ ಉಮಾನಾಥ ಶೇಣಯ್, ಶ್ರೇಯಾಂಸ ಕುಮಾರ್, ಸಜಲ್ ಜೈನ್ ಸೇರಿದಂತೆ ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಭಕ್ತಾದಿಗಳು ಭಾಗವಹಿಸಿದ್ದರು.
ವ್ಯವಸ್ಥಾಪಕ ಸಂಜಯಂತ ಕುಮಾರ್ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
