ತಂಗಿಯೂ ಹುಟ್ಟಿದಾಕ್ಷಣ ಅಣ್ಣನ ಪದವಿ ಹುಟ್ಟಿತು” – Article by Naveen Habib

ನವೀನ್ ಹಬೀಬ್
ಅತಿಥಿ ಉಪನ್ಯಾಸಕರು

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಕೇವಲ ಆಚರಣೆಗಳಲ್ಲ, ಬದಲಾಗಿ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಪವಿತ್ರ ದಾರಗಳು. ಇಂತಹ ಸಡಗರದ ಸಂಭ್ರಮಗಳಲ್ಲಿ ‘ರಕ್ಷಾ ಬಂಧನ’ ಅಥವಾ ‘ರಾಖಿ ಹಬ್ಬ’ಕ್ಕಿರುವ ಸ್ಥಾನವೇ ವಿಶಿಷ್ಟ. ಇದು ಕೇವಲ ಒಂದು ದಾರವನ್ನು ಕೈಗೆ ಕಟ್ಟುವ ಸಂಪ್ರದಾಯವಲ್ಲ; ಬದಲಾಗಿ, ಅಣ್ಣ-ತಂಗಿಯರ ಅಥವಾ ಅಕ್ಕ-ತಮ್ಮಂದಿರ ನಡುವಿನ ಅಕ್ಕರೆ, ನಿಸ್ವಾರ್ಥ ಪ್ರೀತಿ ಮತ್ತು ಜೀವಮಾನದ ರಕ್ಷೆಯ ಆಶ್ವಾಸನೆಯ ಪ್ರತೀಕ.

ಶ್ರಾವಣ ಮಾಸದ ಹುಣ್ಣಿಮೆಯಂದು ಬರುವ ಈ ಸುದಿನದಂದು, ಸಹೋದರಿಯು ತನ್ನ ಸಹೋದರನ ಮಣಿಕಟ್ಟಿಗೆ ಪ್ರೀತಿಯಿಂದ ರಾಖಿ ಕಟ್ಟಿ, ಅವನ ಆಯುರಾರೋಗ್ಯ ಮತ್ತು ಒಳಿತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾಳೆ. ಬದಲಿಗೆ ಸಹೋದರನು ತಂಗಿಗೆ ಉಡುಗೊರೆ ನೀಡಿ, ಜೀವನದ ಪ್ರತಿ ಹೆಜ್ಜೆಯಲ್ಲೂ ರಕ್ಷೆಯಾಗಿ ನಿಲ್ಲುವೆನೆಂಬ ಮಾತು ನೀಡುತ್ತಾನೆ. ಬಾಲ್ಯದ ಸಿಹಿ-ಕಹಿ ನೆನಪುಗಳೊಂದಿಗೆ ಬೆಸೆದುಕೊಂಡಿರುವ ಈ ಬಾಂಧವ್ಯವು, ವಯಸ್ಸು ಮತ್ತು ದೂರಗಳು ಎಷ್ಟೇ ಹೆಚ್ಚಾದರೂ ಕಾಲದೊಂದಿಗೆ ಮತ್ತಷ್ಟು ಗಟ್ಟಿಯಾಗುತ್ತದೆ. ರಕ್ತಸಂಬಂಧವಿರಲಿ ಅಥವಾ ಇಲ್ಲದಿರಲಿ, ಪರಸ್ಪರರ ರಕ್ಷಣೆ ಮತ್ತು ಒಳಿತನ್ನು ಬಯಸುವ ಪ್ರತಿಯೊಬ್ಬರ ಮನದಲ್ಲೂ ಈ ಹಬ್ಬವು ಭಾವನಾತ್ಮಕ ಅಲೆಯೊಂದನ್ನು ಎಬ್ಬಿಸುತ್ತದೆ.

ಚಂದನದ ಬೊಟ್ಟು – ರೇಷ್ಮೆಯ ದಾರ

ಚಂದನದ ಬೊಟ್ಟು, ರೇಷ್ಮೆಯ ದಾರ, ಪ್ರಕೃತಿಯ ಸುಗಂಧ, ಮಳೆಯ ವಾಸನೆ, ಅಣ್ಣನ ಭರವಸೆ, ತಂಗಿಯ ಪ್ರೀತಿ… ಹೀಗೆ ಎಲ್ಲವೂ ಸೇರಿದಾಗ ಬರುವುದು ಸಹೋದರ-ಸಹೋದರಿಯರ ಬಾಂಧವ್ಯವನ್ನು ಗಟ್ಟಿಗೊಳಿಸುವ ಹಬ್ಬವಾದ ರಕ್ಷಾಬಂಧನ.

ಅಣ್ಣ ಎಂದರೆ ಅವಳಿಗೆ ಜೀವ, ಅವನಿಗೂ ಅಷ್ಟೇ ತಂಗಿ ಎಂದರೆ ತನ್ನದೇ ಒಂದು ಭಾಗವಿದ್ದಂತೆ. ಈ ಸಂಬಂಧವೇ ಹಾಗೆ; ಅಲ್ಲಿ ಪ್ರೀತಿ, ಕೋಪ, ಜಗಳ, ಒಮ್ಮೊಮ್ಮೆ ಹೊಡೆದಾಟ-ಮುನಿಸು ಇದ್ದೇ ಇರುತ್ತದೆ. ಆದರೆ, ಇದನ್ನೆಲ್ಲ ಮೀರಿದ ಆಳವಾದ ಭಾಂದವ್ಯವೊಂದಿದೆಯಲ್ಲ, ಅದನ್ನು ವರ್ಣಿಸಲು ಅಸಾಧ್ಯ. ಅದು ಪ್ರತಿ ಅಣ್ಣ-ತಂಗಿಯರ ನಡುವಿನ ನವಿರಾದ ಮಧುರ ಭಾವನೆ. ತನ್ನ ಅಣ್ಣ-ತಮ್ಮಂದಿರು ಯಾವಾಗಲೂ ನಗುತ್ತಾ, ಸಂತೋಷದಿಂದ ಇರಬೇಕು ಎಂದು ಸಹೋದರಿ ಆಶಿಸಿದರೆ, ಸಹೋದರಿಯು ಕಷ್ಟ-ನಷ್ಟಗಳಿಂದ ದೂರಳಾಗಿರಲು ತಾನೇ ನೆರಳಾಗಿ ನಿಲ್ಲಬೇಕು ಎಂದು ಸಹೋದರ ಬಯಸುತ್ತಾನೆ.

ಸಂಭ್ರಮದ ಕ್ಷಣಗಳು ಮತ್ತು ತವರಿನ ಸೆಳೆವು

ತಂಗಿ ಕಟ್ಟುವ ರಾಖಿಗೇ ಕೈಯೋಡ್ಡಿ ಸಂಭ್ರಮಿಸುವ ಅಣ್ಣ ಒಂದು ಕಡೆಯಾದರೆ, ದೂರದಲ್ಲಿರುವ ತಂಗಿ ಕಳುಹಿಸುವ ರಾಖಿಯ ದಾರಿ ಕಾಯುವ ಅಥವಾ ಅವಳ ಬಳಿಗೆ ಓಡುವ ಹಂಬಲ ಇನ್ನೊಂದು ಕಡೆ. ಅಣ್ಣನಿಗೆ ರಾಖಿ ಕಟ್ಟಿ, ಸಿಹಿ ತಿನ್ನಿಸಿ, ಸಂತಸದ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಾ ಉಡುಗೊರೆ ಪಡೆಯುವ ತಂಗಿಯ ಆನಂದಕ್ಕೆ ಮೇರೆಯೇ ಇರುವುದಿಲ್ಲ. ಈ ಹಬ್ಬಕ್ಕೆ ತಂಗಿ ತವರಿಗೆ ಬಂದು, ತನ್ನ ಸಹೋದರರಿಗೆ ರಾಖಿ ಕಟ್ಟಿ ಬಾಲ್ಯದ ದಿನಗಳನ್ನು ನೆನೆಯುತ್ತಾ ಕಾಲ ಕಳೆಯುವುದೇ ಒಂದು ಅಪೂರ್ವ ಅನುಭೂತಿ.

ಎರಡನೇ ತಾಯಿ ತಂಗಿ

ತಂಗಿ ನಿಜವಾಗಿಯೂ ಎರಡನೇ ತಾಯಿ ಎಂದರೆ ತಪ್ಪಾಗದು. ಅವಳಿಗೆ ಸದಾ ತವರಿನ ಮತ್ತು ಸಹೋದರರ ಚಿಂತೆ. ತಂಗಿಗೆ ನಾವು ಏನೂ ಹೇಳದಿದ್ದರೂ, ತನ್ನ ಅಣ್ಣ-ತಮ್ಮನ ಮನಸಿನ ಮಾತನ್ನು ಹೇಳದೆಯೇ ತಿಳಿಯುವ ಅದ್ಭುತ ಶಕ್ತಿ ಅವಳಿಗಿರುತ್ತದೆ. ತನ್ನ ಸಹೋದರನ ಬಗ್ಗೆ ಅವಳಿಗೆ ಗೊತ್ತಿರುವಷ್ಟು ಬೇರೆ ಯಾರಿಗೂ ಗೊತ್ತಿರಲು ಸಾಧ್ಯವಿಲ್ಲ. ನಿಜವಾಗಿಯೂ ತಂಗಿ ಇರುವ ಸಹೋದರರು ಪುಣ್ಯವಂತರು!

ಬಾಂಧವ್ಯಕ್ಕೆ ದೂರದ ಹಂಗಿಲ್ಲ
ವರ್ಷ ಪೂರ್ತಿ ಎಷ್ಟೇ ವ್ಯಸ್ತರಿದ್ದರೂ ಈ ದಿನವನ್ನು ಕೇವಲ ನಿಮ್ಮ ಪರಿವಾರಕ್ಕೆ, ನಿಮ್ಮ ಸಹೋದರಿಗೆ ಮೀಸಲಿಡಿ. ಒಂದು ವೇಳೆ ಅವಳಿಗೆ ಬರಲು ಸಾಧ್ಯವಾಗದಿದ್ದರೆ, ನೀವೇ ಸ್ವತಃ ಅವಳು ಇರುವ ಊರಿಗೆ ಹೋಗಿ ರಾಖಿ ಕಟ್ಟಿಸಿಕೊಳ್ಳಿ. ಆ ಕ್ಷಣದಲ್ಲಿ ಅವರ ಮುಖದಲ್ಲಿ ಕಾಣುವ ಆನಂದ ಕೋಟಿ ಕೊಟ್ಟರೂ ಸಿಗಲಾರದು.

“ಅಣ್ಣನಿಗೆ ಅಣ್ಣನ ಮತ್ತು ತಮ್ಮನಿಗೆ ತಮ್ಮನ ಪದವಿ ಸಿಕ್ಕಿರೋದು ತಂಗಿ ಬಂದ ಮೇಲೆಯೇ…”

ಈ ಸುಂದರ ಹಬ್ಬದ ನೆನಪುಗಳೊಂದಿಗೆ, ಬರುವ ರಕ್ಷಾಬಂಧನದ ದಿನಕ್ಕಾಗಿ ಮತ್ತು ತಂಗಿಯ ಆಗಮನಕ್ಕಾಗಿ ಕಾಯುತ್ತಿರುವ ಪ್ರತಿಯೊಬ್ಬರಿಗೂ ಹಾಗೂ ದೇಶದ ಸಮಸ್ತ ಸಹೋದರ-ಸಹೋದರಿಯರಿಗೂ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು!

ಧನ್ಯವಾದಗಳು…

Leave a Reply

Your email address will not be published. Required fields are marked *