ವನೌಷಧಿ ನೇರಳೆ ಹಣ್ಣು – Article by Kumar Pernaje

ಪೆರ್ನಾಜೆ: ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಋತುಮಾನಗಳಿಗೆ ಅನುಗುಣವಾಗಿ ದೊರೆಯುವ ವೈವಿಧ್ಯಮಯ ಹಣ್ಣುಗಳಲ್ಲಿ ನೇರಳೆ ಹಣ್ಣು ಕೂಡ ಒಂದು. ಅಪ್ಪಟ ಭಾರತೀಯ ಹಣ್ಣಾಗಿರುವ ನೇರಳೆ ಹಣ್ಣು ಹಸಿರಾಗಿದ್ದು ಹಣ್ಣಾಗುತ್ತಿದ್ದಲೇ ಕಡು ನೇರಳೆ ಬಣ್ಣಕ್ಕೆ ತಿರುಗುತ್ತದೆ. ಹೆಚ್ಚು ರಸ ಹಾಗೂ ತಿರುಳನ್ನು ಹೊಂದಿರುವ ನೇರಳೆಯನ್ನೇ ಹೆಚ್ಚಿನವರು ಇಷ್ಟಪಡುತ್ತಾರೆ. ಈ ಹಣ್ಣು ಮೇ-ಜೂನ್ ತಿಂಗಳಲ್ಲಿ ಹೇರಳವಾಗಿ ದೊರೆಯುತ್ತದೆ.

ಈಗಿನ ದಿನಗಳಲ್ಲಿ ನೇರಳೆ ಹಣ್ಣಿನ ಸುಧಾರಿತ ತಳಿಗಳನ್ನು ಅಭಿವೃದ್ಧಿ ಪಡಿಸಿ ಬೀಜ ರಹಿತ ಸಣ್ಣ ಗಿಡದಲ್ಲೇ ಹಣ್ಣು ಕೊಡುವ ತಳಿಗಳು ಹುಟ್ಟಿಕೊಂಡಿವೆ. ದ್ರಾಕ್ಷಿಯಂತೆ ಗೊಂಚಲಾಗಿ ಬೆಳೆಯುವ ನೇರಳೆ ಸ್ವಲ್ಪ ಸಿಹಿ ಹಾಗೂ ಹುಳಿಯಿಂದ ಕೂಡಿ ರುಚಿಯಾಗಿರುತ್ತದೆ. ನೇರಳೆ ಹಣ್ಣಿನಲ್ಲಿ ಔಷಧಿಯ ಗುಣ ಹೇರಳವಾಗಿದೆ.

ನೇರಳೆ ಹಣ್ಣಿನಲ್ಲಿ ಶಕ್ತಿ, ಕಬ್ಬಿಣದ ಅಂಶ, ಸುಣ್ಣದ ಅಂಶ, ವಿಟಮಿನ್ ಸಿ, ಫಾಲಿಕ್ ಆಮ್ಲ, ಕೆರೋಟಿನ್, ಪೊಟ್ಯಾಸಿಯಂ, ಮೆಗ್ನೀಶಿಯಂ, ಸೋಡಿಯಂಗಳಂತಹ ಪೋಷಕಾಂಶಗಳಿವೆ. ಇದರಲ್ಲಿರುವ ಆಂತೋಸಯನಿನ್ ಅಂಶವು ನಾಲಗೆ ನೇರಳೆ ಬಣ್ಣಕ್ಕೆ ತಿರುಗಲು ಕಾರಣವಾಗಿದೆ. ನೇರಳೆ ಮರ ಭೂ ಸವಕಳಿಯನ್ನು ಹಾಗೂ ಇದರ ಮರ ಆಕಾಶದೆತ್ತರಕ್ಕೆ ಬೆಳೆಯುವುದರಿಂದ ಗಾಳಿಹೊಡೆತವನ್ನೂ ತಡೆಯುತ್ತದೆ. ನಗರ ಪ್ರದೇಶಗಳಲ್ಲಿ ನೇರಳೆ ಹಣ್ಣಿಗೆ ಬಲು ಬೇಡಿಕೆ ಇದ್ದು ಕೆ.ಜಿ.ಗೆ 200 ರೂ. ವರೆಗೂ ಧಾರಣೆ ಇದೆ.

ನೇರಳೆ ಹಣ್ಣಿನಿಂದ ಜ್ಯಾಮ್, ಜ್ಯೂಸ್ ಹಾಗೂ ವೈನ್ ತಯಾರಿಸುತ್ತಾರೆ. ನೇರಳೆ ಮರದ ತೊಗಟೆ, ಎಲೆ, ಹಣ್ಣು, ಬೀಜ ಹೀಗೆ ಎಲ್ಲವೂ ಔಷಧಿಯ ಗುಣಗಳಿಂದ ಕೂಡಿದೆ. ಮಧುಮೇಹ ಕಾಯಿಲೆ ಉಳ್ಳವರಿಗೆ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ತಗ್ಗಿಸಲು ಬೆಳಗ್ಗೆ ಖಾಲಿ ಹೊಟ್ಟೆಗೆ ನೇರಳೆ ಮರದ ತೊಗಟೆ ಅಥವಾ ಬೀಜದ ಕಷಾಯ ಉತ್ತಮ ಸಿದ್ಧೌಷಧವಾಗಿದೆ.

ಇದು ವಾತ, ರಕ್ತ ಪಿತ್ತ ನಿವಾರಕವಾಗಿದ್ದು ಹಲ್ಲು, ಒಸಡುಗಳನ್ನು ಗಟ್ಟಿಗೊಳಿಸುತ್ತದೆ. ಜೊತೆಗೆ ಚರ್ಮವ್ಯಾಧಿಗಳ ನಿವಾರಣೆಗೂ ಸಹಕಾರಿಯಾಗಿದೆ. ನೇರಳೆ ಹಣ್ಣು ಸಿಹಿ ಮೂತ್ರ ರೋಗಿಗಳಿಗೆ ವರದಾನವಾಗಿದೆ. ಇದರ ಶರಬತ್ತು ಭೇದಿಯನ್ನು ನಿಯಂತ್ರಿಸುತ್ತದೆ. ವಾಂತಿಗೆ ನೇರಳೆ ಹಣ್ಣಿನ ರಸಕ್ಕೆ ಕಲ್ಲು ಸಕ್ಕರೆ ಸೇರಿಸಿ ಕುಡಿಯಬೇಕು.

ನೇರಳೆ ಮರದ ತೊಗಟೆ ಜಂತು ನಿವಾರಕ, ಹಲ್ಲು, ಒಸಡುಗಳ ತೊಂದರೆಯನ್ನು ನಿಯಂತ್ರಿಸುತ್ತದೆ. ಇಂತಹ ಬಹುಪಯೋಗಿ ಮರವನ್ನು ನಮ್ಮ ಹಿತ್ತಲಲ್ಲೂ ಬೆಳೆದು ಇದರ ಸಂತತಿಯನ್ನು ಉಳಿಸಬೇಕಿದೆ. ಈ ವರ್ಷ ಬರಗಾಲ ಬರುವ ಮುನ್ಸೂಚನೆಯೆಂದು ಮರಗಳಿಗೆ ಮೊದಲೇ ತಿಳಿದಿರುತ್ತದೆ ಹಾಗಾಗಿ ಈ ವರುಷ ನೇರಳೆ ಹಣ್ಣಿನ ಬೆಳೆ.ಪೇಟೆ ಎಲ್ಲೆಡೆ ಅಧಿಕವಾಗಿದ್ದರಿಂದ ಪ್ರಕೃತಿ ವಿಕೋಪದ ಮುನ್ಸೂಚನೆ ನೀಡಿದೆ. ಈಗಾಗಲೇ ಮಳೆಯೂ ಕೂಡ ಕಡಿಮೆಯಾಗಿದೆ ರೈತರಿಗೆ ಆತಂಕವಾಗಿದೆ.

Article by Kumar Pernaje

Leave a Reply

Your email address will not be published. Required fields are marked *