ಧಾರವಾಡ ಎಸ್.ಡಿ.ಎಂ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನ್ ಕುಮಾರ್ ಹಾಗೂ ಪದ್ಮಲತಾ ದಂಪತಿ ಸಿರಿ ಸಂಸ್ಥೆಗೆ ಭೇಟಿ

ಬೆಳ್ತಂಗಡಿ: ಧಾರವಾಡದ ಎಸ್.ಡಿ.ಎಂ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ಪದ್ಮಲತಾ ನಿರಂಜನ್ ಕುಮಾರ್ ದಂಪತಿಗಳು ದಿನಾಂಕ 30-03-2026ರಂದು ಬೆಳ್ತಂಗಡಿಯಲ್ಲಿರುವ ಸಿರಿ ಕೇಂದ್ರ ಕಚೇರಿಗೆ ಭೇಟಿ ನೀಡಿದರು.

ಸಿರಿ ಸಂಸ್ಥೆಯ ವಿವಿಧ ಉತ್ಪನ್ನಗಳ ಉತ್ಪಾದನಾ ವಿಭಾಗಗಳಿಗೆ ಭೇಟಿ ನೀಡಿದ ಅವರು, ಸಂಸ್ಥೆಯಲ್ಲಿ ನಡೆಯುತ್ತಿರುವ ಉತ್ಪಾದನಾ ಚಟುವಟಿಕೆಗಳನ್ನು ವೀಕ್ಷಿಸಿ, ಸಿರಿ ಸಿಬ್ಬಂದಿಯವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸಿರಿ ಸಿಬ್ಬಂದಿಯನ್ನುದ್ದೇಶಿಸಿ ಮಾತನಾಡಿದ ಅವರು, ಸುಮಾರು 22 ವರ್ಷಗಳ ಹಿಂದೆ ಪೂಜ್ಯ ಹೆಗ್ಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರು ಪ್ರಾರಂಭಿಸಿದ ‘ಸಿರಿ’ ಎಂಬ ಕನಸಿನ ಕೂಸು ಇಂದು ಬೆಳೆದು ಹೆಮ್ಮರವಾಗಿ ನಿಂತಿದೆ ಎಂದು ಹೇಳಿದರು.

ಪ್ರಾರಂಭಿಕ ಹಂತದಲ್ಲಿ ಹಳ್ಳಿ-ಹಳ್ಳಿಗಳಲ್ಲಿರುವ ಬಡ ಗ್ರಾಮೀಣ ಮಹಿಳೆಯರಿಗೆ ಅವರವರ ಮನೆಗಳಲ್ಲಿಯೇ ಸಿರಿ ಉತ್ಪನ್ನಗಳನ್ನು ತಯಾರಿಸುವ ತರಬೇತಿ ನೀಡಿ, ಅವರಿಂದ ಉತ್ಪಾದಿಸಲ್ಪಟ್ಟ ವಸ್ತುಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುವ ಮೂಲಕ, ಬಂದ ಆದಾಯದಿಂದ ಮಹಿಳೆಯರ ಜೀವನಕ್ಕೆ ಆರ್ಥಿಕ ಬಲ ನೀಡುವ ಉದ್ದೇಶದಿಂದ ಆರಂಭವಾದ ಸಿರಿ ಸಂಸ್ಥೆ, ಹಂತ ಹಂತವಾಗಿ ಬೆಳೆಯುತ್ತಾ ಇಂದು ಸಾವಿರಾರು ಮಹಿಳೆಯರ ಬದುಕು ಬೆಳಗಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಅಂದಿನಿಂದ ಇಂದಿನವರೆಗೂ ಪೂಜ್ಯರು ಹಾಗೂ ಮಾತೃಶ್ರೀ ಅಮ್ಮನವರ ಈ ಅವಿರತ ಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನಗಳ ಹಿಂದೆ ಒಂದೇ ಧೃಡಸಂಕಲ್ಪ ಅಡಗಿದೆ. ಅದೇ ‘ಸ್ತ್ರೀ ಸಬಲೀಕರಣ’ ಎಂದರು.

ಸಿರಿ ಸಂಸ್ಥೆ ಸೇರಿದಂತೆ ಇಂದು ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್.ಡಿ.ಎಂ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 70ರಷ್ಟು ಮಹಿಳೆಯರೇ ಉದ್ಯೋಗ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಅವರು ಹೇಳಿದರು.

ಸಿರಿಯಲ್ಲಿ ದುಡಿಯುತ್ತಿರುವ ಎಲ್ಲ ಮಹಿಳೆಯರೂ ಪ್ರಾಮಾಣಿಕತೆ ಹಾಗೂ ಸಂತೃಪ್ತಿಯಿಂದ ಕೆಲಸ ನಿರ್ವಹಿಸಿ, ಪೂಜ್ಯ ದಂಪತಿಗಳ ಸ್ತ್ರೀ ಸಬಲೀಕರಣದ ಕನಸನ್ನು ಸಾಕಾರಗೊಳಿಸಬೇಕು. ಸಿರಿ ಸಂಸ್ಥೆಯ ಉತ್ಪನ್ನಗಳು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಮಾನ್ಯತೆ ಪಡೆಯಲಿ, ಇದರಿಂದ ಮತ್ತಷ್ಟು ಮಹಿಳೆಯರಿಗೆ ಉದ್ಯೋಗಾವಕಾಶಗಳು ಲಭಿಸಲಿ ಎಂದು ಅವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎನ್. ಜನಾರ್ದನ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್.ಡಿ.ಎಂ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಸಿರಿ ಉತ್ಪನ್ನಗಳನ್ನೇ ಬಳಸುವಂತೆ ಉತ್ತೇಜನ ನೀಡುವುದರ ಜೊತೆಗೆ, ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಸಾವಿರಾರು ಸಿಬ್ಬಂದಿಯವರಿಗೂ ಸಿರಿ ಉತ್ಪನ್ನಗಳನ್ನು ಬಳಕೆ ಮಾಡಲು ಪ್ರೇರೇಪಿಸುವ ಮೂಲಕ ಸಿರಿ ಸಂಸ್ಥೆಯ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವ ಡಾ. ನಿರಂಜನ್ ಕುಮಾರ್ ಹಾಗೂ ಪದ್ಮಲತಾ ದಂಪತಿಗಳಿಗೆ ಗೌರವ ಅರ್ಪಿಸಿದರು.

ಈ ಸಂದರ್ಭದಲ್ಲಿ ಸಿರಿ ಸಂಸ್ಥೆಯ ವಿವಿಧ ವಿಭಾಗಗಳ ಮೇಲ್ವಿಚಾರಕರು ಹಾಗೂ ಸಿಬ್ಬಂದಿವರ್ಗದವರು ಡಾ. ನಿರಂಜನ್ ಕುಮಾರ್ ಮತ್ತು ಪದ್ಮಲತಾ ದಂಪತಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಸಂಭ್ರಮಿಸಿದರು.

ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *