ಕೋಪ ಬರೋಲ್ಲ,ನಾವು ಮಾಡ್ಕೋತೀವಿ – Article by Naveen Habib

ಸಿಟ್ಟು ಕೋಪ ಅನ್ನೋದು ಒಂದು ದೊಡ್ಡ ಸಮಸ್ಯೆ ಅನ್ನೋದು ನಮ್ಮೆಲ್ಲರ ಅಭಿಪ್ರಾಯ. ನಾವು ನಮ್ಮ ಕೋಪವನ್ನು  ಮಾತಿನಿಂದ, ಕೈಗಳಿಂದ, ಕಣ್ಣುಗಳಿಂದ ಅದನ್ನ ಹೊರಹಾಕುತ್ತೇವೆ. ಇಲ್ಲಾ ಅದನ್ನ ನಮ್ಮ ಮನಸಲ್ಲೇ ಇಟ್ಕೊಂಡು ಕುದಿಯುತ್ತ ಇರುತ್ತೇವೆ. ನಮಗೆಲ್ಲರಿಗೂ ಗೊತ್ತು ಈ ಕೋಪ ನಮ್ಮ ಆರೋಗ್ಯಕ್ಕೆ ಮತ್ತು ಎಲ್ಲಾ ಸಂಭಂದಗಳಿಗೆ ಹಾನಿಕಾರಕ ಅಂತ ಆದರೂ ಮಾಡ್ಕೋತೀವಿ.

ಒಂದು ಕ್ಷಣದ ಕೋಪ ನಿಮ್ಮ ಸುಂದರವಾದ ಬದುಕನ್ನ ಒಂದೇ ಕ್ಷಣದಲ್ಲಿ ಚೂರು ಚೂರು ಮಾಡಿಬಿಡುತ್ತದೆ. ಅದೇನಾದರೂ ಬರದೇ ಇರೋ ಜಾಗದಲ್ಲಿ, ಬರಬಾರದ ಮನುಷ್ಯನ ಮುಂದೆ ನಮ್ಮ ಟೈಮ್ ಸರಿಯಾಗಿ ಇರದ ಸಮಯದಲ್ಲಿ ಬಂದರೆ.

ಪ್ರಿಯ ಓದುಗರೇ ನಿಜ ಹೇಳಬೇಕಾದರೆ

ನಮ್ಮಲ್ಲಿ ಯಾರೊಬ್ಬರಿಗೂ ಕೋಪ ಸಿಟ್ಟು ಬರೋದೇ ಇಲ್ಲಾ.. “””ನಾವೆಲ್ಲ ಬೇಕು ಅಂತ ನಮ್ಮ ಸ್ವಇಚ್ಛೆಯಿಂದ ಯೋಚನೆ ಮಾಡಿ ಕೋಪ ಸಿಟ್ಟು ಮಾಡ್ಕೋತೀವಿ. ಈ ಮಾತನ್ನ ಕೇಳಿ ಆಶ್ಚರ್ಯ ಆಯ್ತಾ ಅದು ಹೇಗೆ ಅಂತ ನಾನು ಎರಡು ಉಧಾಹರಣೆಗಳನ್ನ ಕೊಟ್ಟು ಹೇಳುತ್ತೇನೆ ಕೇಳಿ.

ನೀವು ಆಫೀಸ್ ನಲ್ಲಿ ಅಥವಾ ಯಾರದೋ ಅಂಗಡಿಯಲ್ಲಿ ಕಂಪನಿಯಲ್ಲಿ  ಕೆಲಸ ಮಾಡ್ತಾ ಇದ್ದೀರಾ ಅಂತ ಅನ್ಕೋಳಿ. ಅಲ್ಲಿ ನೀವು ಪ್ರತಿದಿನ ನಿಮ್ಮ ಕೆಲಸವನ್ನ ಸರಿಯಾಗಿ ಮಾಡಿದರೂ ಸಹ ನಿಮ್ಮ ಬಾಸ್ ಅಥವಾ ಮಾಲೀಕ ಯಾವದೋ ಟೆಂಷನ್ ಅಥವಾ ಮನೆಯಲ್ಲಿ ಹೆಂಡತಿ ಜೊತೆ ಜಗಳ ಆಡಿ ಬಂದು ಇಲ್ಲಾ ಬೇರೆ ಯಾರೋ ಮಾಡಿದ ತಪ್ಪಿಗೆ ಕೆಲವೊಮ್ಮೆ ನಿಮಗೆ ಬಾಯಿಗೆಬಂದ ಹಾಗೇ ಮಾತನಾಡುತ್ತಾರೆ ಬೈಯುತ್ತಾರೆ ಅಲ್ವಾ.  ಆ ಸಮಯದಲ್ಲಿ ನಿಮ್ಮದೇನು ತಪ್ಪು ಇಲ್ಲಾ ಅಂದ್ರು ನಿಮಗೆ ಅವರು ಹೇಗೆ ಬೇಕೋ ಹಾಗೇ ಮಾತನಾಡಿದರು ಅಲ್ಲಿ ನೀವು ಕೋಪ ಮಾಡಿಕೊಳ್ಳೋದಿಲ್ಲ. ಯಾಕೆ ಅಂದ್ರೆ ಅಲ್ಲಿ ಕೋಪ ಮಾಡಿಕೊಂಡ್ರೆ ನಿಮಗೆ ನಷ್ಟ ಇದೆ ಅಂತ. ಅಲ್ಲಿ ಕೋಪ  ಮಾಡ್ಕೊಳೋದು ದೂರ ಹೋಯ್ತು ಬಾಸ್ ಗೇ ಕಣ್ಣು ದಿಟ್ಟಸಿ ನೋಡಿದರೂ ಕೆಲಸ ಹೋಗುತ್ತೆ ಅನ್ನೋ ಭಯ ಅಲ್ವಾ. ಕೋಪ ಮಾಡ್ಕೊಂಡು ಬಾಸ್ ಗೇ ತಿರುಗಿ ಮಾತಾಡಿದರೇ ಕೆಲಸ ಹೋಯ್ತು, ಅಂದ್ರೆ ಮನೆ ಬಾಡಿಗೆ,, ಮಕ್ಕಳ ಸ್ಕೂಲ್ ಫೀ,, ಮತ್ತು ಮನೆ ಬ್ಯಾಂಕ್ ಕಂತು ಹೇಗೆ ನೋಡ್ಕೊಳೋದು ಅನ್ನೋ ಭಯ.. ಇಲ್ಲಿ ಕೋಪ ಮಾಡ್ಕೊಂಡ್ರೆ ನನಗೆ ನಷ್ಟ ಲಾಸ್ ಅಂತ ನೀವು ಕೋಪ ಮಾಡ್ಕೊಳಿಲ್ಲ..

 ಮತ್ತೊಂದು ಕಡೆ ನೋಡೋದಾದರೆ..

ಮನೆಗೆ ಬಂದ ಕೂಡಲೇ ಬಾಸ್ ಮಾಲೀಕ ವಿನಹಕಾರಣ ಬೈದಿದ್ದಕ್ಕೆ ಅಲ್ಲಿಯ ಕೋಪ ಮನೆಗೆ ಬಂದು ಮಕ್ಕಳ ಮೇಲೆ ಹೆಂಡತಿಯ ಮೇಲೆ ತೋರಿಸೋದು. ಇಲ್ಲಿ ಮನೆಯಲ್ಲಿ ವಿನಃಕಾರಣ ಮನೆಯವರ ಮೇಲೆ ಕೋಪ ಮಾಡಿಕೊಳ್ಳೋದು. ಇಲ್ಲಿ ಯಾಕೆ ಕೋಪ ಮಾಡ್ಕೋತಾರೆ ಅಂದರೆ ಇಲ್ಲಿ ಅವರಿಗೇ ಯಾವದೇ ನಷ್ಟ ಲಾಸ್ ಇಲ್ಲಾ ಅನ್ನೋ ಭರವಸೆ ಮೇಲೆ. ಇಲ್ಲಿ ನಾನು ಕೋಪ ಮಾಡ್ಕೊಂಡ್ರೆ ಯಾರು ನನಗೆ ಏನು ಅನ್ನೋಲ್ಲ ಹೇಳಲ್ಲ ಅನ್ನೋ ನಂಬಿಕೆ.. ಇವನ್ನ ನೋಡಿದ ಮೇಲೆ ನನಗೆ ಒಂದು ವಿಚಾರ ಬಂತು ಅದೇನು ಅಂದ್ರೆ..

“ಎಲ್ಲಿ ನಮ್ಮ ದರ್ಪ ಅಧಿಕಾರ ನಡೆಯುವದಿಲ್ಲವೋ ಅಲ್ಲಿ ನಾವು ಕೋಪ ಸಿಟ್ಟು ಮಾಡಿಕೊಳ್ಳೋದಿಲ್ಲ ಮತ್ತು ಎಲ್ಲಿ ನಮ್ಮ ದರ್ಪ ಅಧಿಕಾರ ನಡೆಯುತ್ತದೆಯೋ ಅಲ್ಲಿ ಕೋಪ ಸಿಟ್ಟು ಮಾಡಿಕೊಳ್ಳುತ್ತೇವೆ” 

ಮನೆಯಲ್ಲಿ ಕೋಪ ಸಿಟ್ಟು ಮಾಡಿಕೊಂಡ್ರೆ ನನಗೆ ಏನು ಸಮಸ್ಯೆ ಇಲ್ಲಾ ನನಗೆ ಯಾವದೇ ತೊಂದ್ರೆ ಇಲ್ಲಾ ಅನ್ನೋರಿಗೆ ನಾನು ಒಂದು ನಡೆದ ಘಟನೆಯ ಬಗ್ಗೆ ಹೇಳಲು ಇಷ್ಟ ಪಡುತ್ತೇನೆ..

ಒಂದು ಊರಲ್ಲಿ ಒಂದು ಸುಂದರವಾದ ಸಣ್ಣ ಕುಟುಂಬ ಆ ಕುಟುಂಬದಲ್ಲಿ ಗಂಡ ಹೆಂಡತಿ ಹಾಗೂ ಅವರ ಮುದ್ದಾದ 5 ವರ್ಷದ ಮಗಳು ಇಷ್ಟೇ ತುಂಬಾ ಸಂತೋಷದ ಜೀವನ ನಡೆಸುತ್ತಿದ್ದರು.ಹೀಗೆ ಇರುವಾಗ ಒಂದು ದಿನ ಆ ವ್ಯಕ್ತಿ ತಮ್ಮ ಮದುವೆ ವಾರ್ಷಿಕೋತ್ಸವದ ಅಂಗವಾಗಿ ತನ್ನ ಪತ್ನಿ ಮಗಳಿಗೆ ಉಡುಗೊರೆಯಾಗಿ ಒಂದು ಹೊಸ” ಕಾರ್” ಅನ್ನು ತರುತ್ತಾನೆ. ಅದರ ಮುಂದಿನ ದಿನ ಆ ವ್ಯಕ್ತಿ ತನ್ನ ಆಫೀಸ್ ಗೇ ಹೋಗೋದಕ್ಕೆ ಅಂತ ಕಾರ್ ಹತ್ರ ಬರುವಾಗ ಅವನ ಮಗಳು ಕಾರ್ ಮೇಲೆ ಏನೋ ಪೆನ್ಸಿಲ್ ತಗೊಂಡು ಗೀಚುತ್ತ ನಿಂತಿದ್ದಳು. ಅದನ್ನ ನೋಡಿ ಆ ವ್ಯಕ್ತಿ ಕೋಪಗೊಂಡು ಆ ಮಗು ಹತ್ರ ಹೋಗಿ ಹೊಸ ಕಾರ್ ಮೇಲೆ ಗಿಚ್ಚ್ತಿಯ ಅಂತ ಹೇಳಿ ಜೋರಾಗಿ ಒಂದು ಏಟು ಹೊಡಿಯುತ್ತಾನೆ. ಆ ಹೊಡೆತದಿಂದ ಆ ಮಗು ಪ್ರಜ್ಞೆತಪ್ಪಿ ಕೆಳಗೆ ಬೀಳುತ್ತದೆ. ಏನು ಮಾಡಿದರು ಏಳೋದಿಲ್ಲ ಆಸ್ಪತ್ರೆಗೆ ತಗೊಂಡು ಹೋಗಿ ನೋಡಿದರೆ ತಂದೆಯ ಏಟಿಗೆ  ಆ ಮಗು ಪ್ರಾಣ ಪಕ್ಷಿ ಹಾರಿ ಹೋಗಿರುತ್ತದೆ.. ಅದು ಆ ದಂಪತಿಗಳಿಗೆ ತುಂಬಾ ಕಠೋರವಾದ ಅನುಭವ.. ಹೀಗೆ ಇರುವಾಗ ಎಲ್ಲಾ ಮುಗಿದು ಮನೆಗೆ ಬಂದು ಹೊರಗಡೆ ಆ ತಂದೆ ಕಾರ್ ಹತ್ತಿರ ಕೂತ್ಕೊಂಡು ಮಗಳನ್ನ ನೆನೆಯುತ್ತ ಇರುವಾಗ ಅವನ ದೃಷ್ಟಿ ಕಾರಿನ ಮೇಲೆ ಮಗಳು ಗೀಚಿದ ಜಾಗದ ಮೇಲೆ ಹೋಗುತ್ತದೆ. ಆಗ ಅವನು ಎದ್ದು ಹೋಗಿ ಅಲ್ಲಿ ಏನು ಬರೆದಿದೆ ಎಂದು ನೋಡಿದಾಗ ಅಲ್ಲಿ ಬರೆದಿರುವ ವಾಕ್ಯ ನೋಡಿ ಅವನು ಬಿಕ್ಕಿ ಬಿಕ್ಕಿ ಅಳಲು ಶುರು ಮಾಡುತ್ತಾನೆ ಬಿದ್ದು ಬಿದ್ದು ಅಳಲು ಶುರು ಮಾಡುತ್ತಾನೆ… ಅಲ್ಲಿ ಏನು ಬರೆದಿತ್ತು ಎಂದರೆ… ನನ್ನ ಅಪ್ಪ ಜಗತ್ತಿನ ಅತ್ಯಂತ ಒಳ್ಳೆಯ ಅಪ್ಪ ಐ ಲವ್ ಯು ಅಪ್ಪ (I Love U Pappa)

ನೋಡಿ ಆ ತಂದೆಯ ಒಂದು ಕ್ಷಣದ ಕೋಪ ಅವನ ಪ್ರೀತಿಯ ಮಗಳನ್ನೇ ಬಲಿ ಪಡೆದು ಅವನ ಜೀವನವನ್ನೇ ಹಾಳು ಮಾಡಿತು…

ಆಫೀಸ್ ನಲ್ಲಿ ಕೋಪ ಮಾಡ್ಕೊಂಡ್ರೆ ಕೇವಲ ಕೆಲಸ ಹೋಗುತ್ತೆ ಮತ್ತೇ ಬೇರೆ ಕೆಲಸನು ಸಿಗುತ್ತೆ.. ಆದರೆ ಮನೆಯ ಸದಸ್ಯರು ಹೋದರೆ ಅವರ ಪ್ರೀತಿ ಹೋದರೆ ಅದು ಮರಳಿ ಎಂದು ಸಿಗೋಲ್ಲ… ಅದಕ್ಕೆ ಕೋಪ ಮಾಡಿಕೊಳ್ಳೋದು ಬಿಡಿ..

ವ್ಯಕ್ತಿಗಳಿಗೆ ಮಹತ್ವ ಕೊಡಿ ವಸ್ತುಗಳಿಗೆ ಅಲ್ಲಾ

ನವೀನ ಗೋಪಾಲಸಾ ಹಬೀಬ(M. A B. Ed)

ಶಿಕ್ಷಕರು 

Leave a Reply

Your email address will not be published. Required fields are marked *