ತುಳು ಅಧಿಕೃತ ಭಾಷೆ: ಸುಮಾಲೋಚನಾ ಸಭೆಗೆ ಮುಖ್ಯಮಂತ್ರಿಗೆ ಮನವಿ

ಮಂಗಳೂರು: ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ  ಸಮಾಲೋಚನಾ ಸಭೆಯನ್ನು ಆಯೋಜಿಸುವಂತೆ ಕೋರಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ತುಳು ಭಾಷೆಯನ್ನು ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸುವ ನಿಟ್ಟಿನಲ್ಲಿ ಸರಕಾರದ ನಿರ್ದೇಶನದಂತೆ  ನೆರೆಯ ಆಂಧ್ರಪ್ರದೇಶ ರಾಜ್ಯಕ್ಕೆ  ಅಧ್ಯಯನ ಸಮಿತಿಯು ತೆರಳಿ  ಅಧ್ಯಯನ ವರದಿಯನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಿದೆ.

ಆಂಧ್ರಪ್ರದೇಶದಲ್ಲಿ  ಉರ್ದು ಭಾಷೆಯನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಘೋಷಿಸಲು ಅಲ್ಲಿನ ಸರಕಾರ ಕೈಗೊಂಡ ವಿಧಿವಿಧಾನಗಳು ಹಾಗೂ ಆಡಳಿತಾತ್ಮಕ ಕ್ರಮಗಳ ಬಗ್ಗೆ ಈ ಸಮಿತಿಯು ವರದಿ ನೀಡಿದೆ.

ಸದರಿ ವರದಿ ಬಗ್ಗೆ  ಹಾಗೂ ಮುಂದಿನ  ಪ್ರಕ್ರಿಯೆಗಳ ಬಗ್ಗೆ ಚರ್ಚೆ ನಡೆಸಿ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ  ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ತುಳು ಅಕಾಡೆಮಿ ಪ್ರತಿನಿಧಿಗಳ ಸಭೆಯನ್ನು ಆಯೋಜಿಸಬೇಕೆಂದು  ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರು ಮುಖ್ಯಮಂತ್ರಿಗಳಿಗೆ ಕೋರಿಕೆ ಸಲ್ಲಿಸಿದರು.

Leave a Reply

Your email address will not be published. Required fields are marked *