
ನವೀನ್ ಮಾಸ್ಟರ್
ಬಾಲ್ಯದಲ್ಲಿ ಆಟಿಕೆಗಳನ್ನು ಕೇಳಬೇಕಿದ್ದ ಕೈಗಳು,
ಚಿಕ್ಕ ವಯಸ್ಸಿನಲ್ಲೇ ಮನೆಯ ಜವಾಬ್ದಾರಿಯ ಭಾರವನ್ನು ಎತ್ತಿಕೊಂಡವು.
ತನ್ನಿಷ್ಟದ ಇಚ್ಛೆ, ಆಸೆ, ಕನಸುಗಳನ್ನೆಲ್ಲ ಸದ್ದಿಲ್ಲದೆ ಹೂತುಹಾಕಿ,
ಕುಟುಂಬದ ನೆರಳಾಗಿ ನಿಲ್ಲುವುದರಲ್ಲೇ ಅವನ ಇಡೀ ಆಯುಷ್ಯ ಕಳೆದುಹೋಯಿತು!
ಬೇರೆಯವರಂತೆ ಮುಕ್ತವಾಗಿ ಹಾರಾಡುವ ಆಸೆ ಅವನಿಗೂ ಇತ್ತು,
ಆದರೆ ಜವಾಬ್ದಾರಿಯ ಬಲವಾದ ಸರಪಳಿಗಳು ಅವನ ರೆಕ್ಕೆಗಳನ್ನೇ ಕತ್ತರಿಸಿಬಿಟ್ಟವು.
ಕಣ್ಣುತುಂಬ ಕನಸುಗಳಿದ್ದರೂ, ಮನೆಯ ಕಷ್ಟಗಳೇ ದೊಡ್ಡದಾದಾಗ,
ತನ್ನ ಇಚ್ಛೆಗಳನ್ನೆಲ್ಲ ಬಾಲ್ಯದಲ್ಲೇ ಬಲಿಕೊಡಬೇಕಾಯಿತು!
ತನ್ನ ಆಸೆಗಳ ಬಾಗಿಲಿಗೆಲ್ಲ ಬೀಗ ಜಡಿದು,
ಕುಟುಂಬದ ಆಸರೆಗಾಗಿ ತನ್ನ ಯೌವನವನ್ನೇ ಮುಡಿಪಾಗಿಟ್ಟ.
ಈ ಜಗತ್ತಿನಲ್ಲಿ ಯಾರೂ ಕಾಣದ, ಯಾರಿಗೂ ಕೇಳಿಸದ,
ಅದೆಷ್ಟೋ ಕನಸುಗಳ ಮೌನ ಹತ್ಯೆಗೆ ಸಾಕ್ಷಿ ಈ ‘ಮನೆಯ ಮಗನ’ ಬದುಕು!
ಖಾಲಿ ಜೇಬಿನಲ್ಲೂ ಕುಟುಂಬದ ಮುಗುಳುನಗುವಿಗಾಗಿ ಜಗತ್ತನ್ನೇ ಗೆದ್ದು ತರುವವನು,
ಅವನೇ ನಮ್ಮ ನಿಮ್ಮ ನಡುವಿನ ಆ ‘ಮನೆಯ ಮಗ’.
ಬಟ್ಟೆ ಹರಿದರೂ, ಮನಸ್ಸು ಮುರಿದರೂ,
ಕುಟುಂಬದ ಸಂತೋಷದ ಮುಂದೆ ಅವನ ಪ್ರತಿಯೊಂದು ತ್ಯಾಗವೂ ಮೌನವಾಗಿಯೇ ಉಳಿದುಬಿಟ್ಟಿತು!
ಆಸೆಗಳ ಸಮಾಧಿಯ ಮೇಲೆ ನಿಂತು, ನಗುನಗುತ್ತಲೇ ಎಲ್ಲರ ಬದುಕನ್ನು ಕಟ್ಟಿಕೊಟ್ಟವನು…
ಪ್ರತಿಯೊಂದು ಕುಟುಂಬದ ನಗುವಿನ ಹಿನ್ನೆಲೆಯಲ್ಲೂ,
ತನ್ನ ಸ್ವಂತ ಆಸೆಗಳನ್ನು ಸದ್ದಿಲ್ಲದೆ ಕೊಲೆ ಮಾಡಿಕೊಂಡ ಒಬ್ಬ ಮಗನ ತ್ಯಾಗ ಅಡಗಿರುತ್ತದೆ.
ಅವನ ಮುಖದ ಮಂದಹಾಸದ ಹಿಂದೆ, ಸತ್ತುಹೋದ ಸಾವಿರಾರು ಕನಸುಗಳ ಸಮಾಧಿಯಿದೆ…!
ತಂದೆಯ ಭಾರ ಕಡಿಮೆ ಮಾಡಲು ತನ್ನ ವಯಸ್ಸನ್ನೇ ಮರೆತವನು,
ತಂಗಿಯ ಮದುವೆ, ತಮ್ಮನ ಖುಷಿಗಾಗಿ ತನ್ನ ಕನಸನ್ನೇ ಮಾರಿದವನು;
ಜೇಬಿನಲ್ಲಿ ಕಾಸಿಲ್ಲದಿದ್ದರೂ ಮುಖದಲ್ಲಿ ಧೈರ್ಯ ತೋರುತ್ತಾ,
ಕುಟುಂಬದ ಪ್ರತಿಯೊಬ್ಬರ ಆಸೆಗೆ ತನ್ನನ್ನೇ ತೇದು ತೇಯ್ದವನು!
ಬಾಲ್ಯದಲ್ಲಿ ಒಡಲು ಶುರು ಮಾಡಿದವನು,, ಸ್ವಲ್ಪ ನಿಂತು ವಿಶ್ರಾಂತಿ ಪಡೆಯೋಣ ಎಂದು ನಿಂತಾಗ,, 25 ವರ್ಷ ಕಳೆದು ಹೋಗಿತ್ತು,,
ಮನೆಯ ಮುಗುಳುನಗುವಿಗಾಗಿ, ತನ್ನ ಆಸೆಗಳನ್ನೇ ದಹಿಸಿದವನು. “ಮನೆ ಮಗ”
