“ಊಹೆಗಳ ಲೋಕದಲ್ಲಿ ತರಾತುರಿಯ ತೀರ್ಪು! ಕಳೆದುಹೋದ ಸತ್ಯ”- Article by Naveen Habib

Article by
ನವೀನ್ ಹಬೀಬ್ ಉಪನ್ಯಾಸಕರು ಪ್ರೇರಕ ಬರಹ ಮತ್ತು ಭಾಷಣಕಾರರು

ಕೆಲ ದಿನಗಳ ಹಿಂದೆ ರಜಾ ದಿನದಲ್ಲಿ ನಾನು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ನೋಡಿದೆ. ಆ ವಿಡಿಯೋದಲ್ಲಿದ್ದ ಸುಂದರವಾದ ಸಂದೇಶವು ನನ್ನ ಮನಸ್ಸಿಗೆ ಆಳವಾಗಿ ನಾಟಿತು; ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು.

ಒಂದು ದಿನ ಬೇಸಿಗೆಯ ಬಿಸಿಲಿನ ಬೇಗೆಯಲ್ಲಿ ವ್ಯಕ್ತಿಯೊಬ್ಬ ಪ್ರಯಾಣಿಸುತ್ತಿರುತ್ತಾನೆ. ನಡೆದು ನಡೆದು ತುಂಬಾ ಸುಸ್ತಾದ ಆತ, ಹತ್ತಿರದಲ್ಲಿದ್ದ ದೊಡ್ಡ ಮರವೊಂದರ ನೆರಳಿನಲ್ಲಿ ನಿಂತು ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯೋಣ ಎಂದುಕೊಳ್ಳುತ್ತಾನೆ. ಆ ಮರದ ಕೆಳಗೆ ನಿಂತ ತಕ್ಷಣವೇ, ಹತ್ತಿರದ ಮನೆಯ ಕಿಟಕಿ ತೆರೆಯುತ್ತದೆ ಮತ್ತು ಒಳಗಿನಿಂದ ಒಬ್ಬ ವ್ಯಕ್ತಿ ಧ್ವನಿಗೂಡಿಸಿ, “ಅಣ್ಣಾ, ಕುಡಿಯಲು ಸ್ವಲ್ಪ ನೀರು ತರಲೇ?” ಎಂದು ಸ್ನೇಹಪರವಾಗಿ ಕೇಳುತ್ತಾನೆ. ಸುಸ್ತಾಗಿದ್ದ ಆಯಾಸಗೊಂಡ ವ್ಯಕ್ತಿ “ಸರಿ” ಎನ್ನುತ್ತಾನೆ. ಆ ಮನೆಯವನು ನೀರು ತರಲು ಒಳಗೆ ಹೋಗುತ್ತಾನೆ.

ಮರದ ನೆರಳಿನಲ್ಲಿ ನಿಂತ ಆ ವ್ಯಕ್ತಿ ಹೀಗೆ ಯೋಚಿಸತೊಡಗುತ್ತಾನೆ— “ಎಂತಹ ಒಳ್ಳೆಯ ಮನುಷ್ಯ! ನನಗೆ ಆತ ಯಾರೆಂದು ಗೊತ್ತಿಲ್ಲ, ನನಗೂ ಆತನ ಪರಿಚಯವಿಲ್ಲ. ಆದರೂ ನನಗೆ ಬಾಯಾರಿಕೆಯಾಗಿದೆ ಎಂದು ಆತನಿಗೆ ಹೇಗೆ ತಿಳಿಯಿತು? ಎಷ್ಟು ದಯಾನಿಧಿ!” ಎಂದುಕೊಳ್ಳುತ್ತಾ ಅಲ್ಲೇ ನಿಂತಿರುತ್ತಾನೆ.

ಹೀಗೆ ಐದು-ಏಳು ನಿಮಿಷಗಳು ಕಳೆಯುತ್ತವೆ. ನೀರೂ ಬರುವುದಿಲ್ಲ, ಆ ವ್ಯಕ್ತಿಯೂ ಬರುವುದಿಲ್ಲ. ತಕ್ಷಣವೇ ಆತನ ಆಲೋಚನೆಗಳು ಬದಲಾಗಲು ಶುರುವಾಗುತ್ತವೆ— “ಎಂತಹ ವಿಚಿತ್ರ ಮನುಷ್ಯ! ನನಗೆ ನೀರು ಕೊಡಲು ಇಷ್ಟವಿರಲಿಲ್ಲ ಎಂದಮೇಲೆ, ನನ್ನನ್ನು ಇಲ್ಲೇಕೆ ನಿಲ್ಲಲು ಹೇಳಿದ? ಎಂಥಾ ಮೂರ್ಖ ಮನುಷ್ಯ!” ಎಂದುಕೊಳ್ಳುತ್ತಾ ಅಲ್ಲಿಂದ ಹೊರಡಲು ಮುಂದಾಗುತ್ತಾನೆ.

ಅಷ್ಟರಲ್ಲಿ ಆ ಮನೆಯವನು ಕೈಯಲ್ಲಿ ಗ್ಲಾಸ್ ಹಿಡಿದು ಬಂದು ಹೇಳುತ್ತಾನೆ— “ಅಣ್ಣಾ, ತಡವಾದದ್ದಕ್ಕೆ ಕ್ಷಮಿಸಿ. ಕೇವಲ ನೀರು ಕೊಡುವುದಕ್ಕಿಂತ ನಿಮಗೆ ಒಂದು ಒಳ್ಳೆಯ ಶರಬತ್ ಮಾಡಿ ಕೊಟ್ಟರೆ ಚೆನ್ನಾಗಿರುತ್ತದೆ ಎಂದುಕೊಂಡೆ, ಅದಕ್ಕೆ ಸ್ವಲ್ಪ ತಡವಾಯಿತು.”ಎನ್ನುತ್ತಾನೆ.

ಇದನ್ನು ಕೇಳಿದ ತಕ್ಷಣವೇ ಆತನ ಆಲೋಚನೆಗಳು ಮತ್ತೆ ಧನಾತ್ಮಕವಾಗಿ ಬದಲಾಗುತ್ತವೆ! ಆತ ಹೇಳತೊಡಗುತ್ತಾನೆ— “ವಾಹ್! ಎಂಥಾ ದಯಾಮಯಿ ಮನುಷ್ಯ! ಇತ್ತೀಚಿನ ದಿನಗಳಲ್ಲಿ ಹೀಗೂ ದಯಾಳುಗಳಿರುತ್ತಾರೆಯೇ?” ಹೀಗೆ ಹೇಳುತ್ತಾ ಶರಬತ್ ಕುಡಿಯಲು ಶುರು ಮಾಡುತ್ತಾನೆ. ಆದರೆ ಕುಡಿದು ನೋಡಿದರೆ ಆ ಶರಬತ್‌ನಲ್ಲಿ ಸಕ್ಕರೆಯೇ ಇರುವುದಿಲ್ಲ!

ಕೂಡಲೇ ಆತನ ಆಲೋಚನೆಗಳು ಮತ್ತೊಮ್ಮೆ ಬದಲಾಗುತ್ತವೆ— “ಛೆ, ಇವನು ನಿಜಕ್ಕೂ ಒಬ್ಬ ಹುಚ್ಚ! ಇಂತಹ ಹುಳಿ ಶರಬತ್ ಕುಡಿಸುವುದಕ್ಕಿಂತ ನೀರೇ ಕೊಡಬಹುದಿತ್ತು, ಅಪ್ಪಟ ಮೂರ್ಖ!” ಎಂದು ಮನಸ್ಸಿನಲ್ಲಿಯೇ ಬೈದುಕೊಳ್ಳುತ್ತಾ, ಆ ಮನೆಯವನ ಬಳಿ ಹೇಳುತ್ತಾನೆ— “ಅಯ್ಯಾ, ಇದರಲ್ಲಿ ಸಕ್ಕರೆಯೇ ಇಲ್ಲ, ತೀರಾ ಹುಳಿಯಾಗಿದೆ.”

ಅದಕ್ಕೆ ಆ ವ್ಯಕ್ತಿ ಮಂದಸ್ಮಿತನಾಗಿ ಹೇಳುತ್ತಾನೆ— “ಅಣ್ಣಾ, ಕ್ಷಮಿಸಿ. ನಾನು ಅದರಲ್ಲಿ ಸಕ್ಕರೆ ಹಾಕದಿರಲು ಕಾರಣವಿಷ್ಟೇ; ನಿಮಗೆ ಒಂದುವೇಳೆ ಮಧುಮೇಹ (ಸಕ್ಕರೆ ಕಾಯಿಲೆ) ಇದ್ದರೆ ಹೇಗೆ ಎಂದು ಯೋಚಿಸಿದೆ. ಅದಕ್ಕಾಗಿಯೇ ನಿಮ್ಮನ್ನು ಕೇಳಿ ಸಕ್ಕರೆ ಹಾಕೋಣ ಎಂದು ಅದನ್ನು ಪ್ರತ್ಯೇಕವಾಗಿ ತಂದಿದ್ದೇನೆ. ನಿಮಗೆ ಎಷ್ಟು ಬೇಕೋ ನೀವೇ ಹಾಕಿಕೊಳ್ಳಿ.” ಎಂದನು.

ಇದನ್ನು ಕೇಳಿದ ಕೂಡಲೇ ಆತನ ಆಲೋಚನೆಗಳು ಮತ್ತೊಮ್ಮೆ ಧನಾತ್ಮಕವಾಗಿ ಬದಲಾಗುತ್ತವೆ! ಆತ ಹೇಳುತ್ತಾನೆ— “ಈ ಮನುಷ್ಯ ನಿಜಕ್ಕೂ ಮಹಾನ್ ವ್ಯಕ್ತಿ! ಇತ್ತೀಚಿನ ದಿನಗಳಲ್ಲಿ ಸ್ವಂತ ಮನೆಯವರೇ ಇಷ್ಟು ಕಾಳಜಿ ವಹಿಸುವುದಿಲ್ಲ, ಆದರೆ ಈ ಅಪರಿಚಿತ ವ್ಯಕ್ತಿ ನನಗಾಗಿ ಇಷ್ಟೊಂದು ಯೋಚಿಸಿದ್ದಾನಲ್ಲ! ಇವನು ನಿಜಕ್ಕೂ ಮಹಾನ್.”ಎನ್ನುತ್ತಾನೆ.

{“”ಅಂತಿಮ ಸತ್ಯ: ಓದುಗರೇ, ಗಮನಿಸಿ,,,}

ನಮ್ಮ ಆಲೋಚನೆಗಳು ಎಷ್ಟು ಬೇಗನೆ ಬದಲಾಗುತ್ತವೆ! ಎದುರಿಗಿರುವ ವ್ಯಕ್ತಿ ಒಳ್ಳೆಯವನಾ ಅಥವಾ ಕೆಟ್ಟವನಾ ಎಂದು ಸರಿಯಾಗಿ ಅರ್ಥ ಮಾಡಿಕೊಳ್ಳಲು ನಾವು ಸ್ವಲ್ಪ ಸಮಯವನ್ನೂ ನೀಡುವುದಿಲ್ಲ. ಯಾವುದೇ ಸ್ಪಷ್ಟತೆ ಇಲ್ಲದೆ ತರಾತುರಿಯಲ್ಲಿ ಅಭಿಪ್ರಾಯಕ್ಕೆ ಬರುವುದು ನಮ್ಮ ಸ್ವಭಾವವಾಗಿಬಿಟ್ಟಿದೆ. ಎದುರಿನ ವ್ಯಕ್ತಿಯ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲದೆ, ಕೇವಲ ಊಹೆಗಳ ಆಧಾರದ ಮೇಲೆ ಕ್ಷಣಮಾತ್ರದಲ್ಲಿ ಅಭಿಪ್ರಾಯಗಳನ್ನು ಬದಲಾಯಿಸಿಕೊಳ್ಳುವುದು ನಮ್ಮ ದೌರ್ಬಲ್ಯ.

ಯಾವುದೇ ಪರಿಸ್ಥಿತಿಯ ಹಿಂದಿನ ನೈಜ ಕಾರಣ ತಿಳಿಯದೆ ತರಾತುರಿಯಲ್ಲಿ ತೀರ್ಪು ನೀಡುವುದು ಸರಿಯಲ್ಲ. ಕ್ಷಣಿಕ ಭಾವನೆಗಳಿಗೆ ತಕ್ಕಂತೆ ಆಲೋಚನೆಗಳು ಬದಲಾಗುತ್ತಿರುತ್ತವೆ. ಆದರೆ, ತಾಳ್ಮೆಯಿಲ್ಲದೆ ರೂಢಿಸಿಕೊಳ್ಳುವ ಅಭಿಪ್ರಾಯಗಳು ಹೆಚ್ಚಾಗಿ ತಪ್ಪಾಗುತ್ತವೆ.

ಹಾಗಾಗಿ, ಇತರರನ್ನು ಬೇಗನೆ ನಿರ್ಧರಿಸುವ ಸ್ವಭಾವವನ್ನು ಬಿಡಬೇಕು. ಸತ್ಯದ ಅರಿವಾಗುವವರೆಗೆ ತಾಳ್ಮೆಯಿಂದ ಕಾಯುವ ಗುಣ ಬೆಳೆಸಿಕೊಳ್ಳುವುದು ಅತ್ಯಾವಶ್ಯಕ. ವಿವೇಕದಿಂದ ವರ್ತಿಸುವುದೇ ನಿಜವಾದ ಬುದ್ಧಿವಂತಿಕೆ.

Leave a Reply

Your email address will not be published. Required fields are marked *