ಮಂಗಳೂರು: ನಮ್ಮ ರಾಷ್ಟ್ರದ ಹಿರಿಮೆ, ಗರಿಮೆಗಳ ಪುಸ್ತಕಗಳನ್ನು ಯುವಪೀಳಿಗೆ ಓದಬೇಕಾಗಿದೆ. ಆಗ ನಮ್ಮ ದೇಶದ ಸೈನಿಕರ ತ್ಯಾಗ, ಪರಿಶ್ರಮದ ಬಗ್ಗೆ ಅಭಿಮಾನ ಮೂಡುತ್ತದೆ. ನಮ್ಮ ವೀರ ಯೋಧರು ಗಡಿಯಲ್ಲಿ ಪ್ರಾಣದ ಹಂಗು ತೊರೆದು ನಮ್ಮನ್ನು ರಕ್ಷಿಸುವ ಕಾರಣ ನಾವೆಲ್ಲರೂ ನೆಮ್ಮದಿಯಾಗಿದ್ದೇವೆ. ಆದರೆ ಸೈನಿಕರ ಮಹತ್ವ ಗೊತ್ತಿಲ್ಲದವರು ಇತ್ತೀಚೆಗೆ ಜಂತರ್ ಮಂಥರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸೈನಿಕರನ್ನು ಅವಹೇಳನ ಮಾಡುತ್ತಾ ವಿಡಿಯೋ ಮಾಡಿದ್ದಾರೆ. ಅದನ್ನು ನೋಡಿದಾಗ ನಮ್ಮ ಯುವಜನಾಂಗ ಎತ್ತ ಸಾಗುತ್ತಿದೆ ಎನ್ನುವ ಆತಂಕ ಉಂಟಾಗುತ್ತದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಲತೇಶ್ ಬಾಕ್ರಬೈಲ್ ಹೇಳಿದ್ದಾರೆ.
ಅವರು ದಿಶಾ ಭಾರತ್, ಕೆನರಾ ಕಾಲೇಜು (ಸ್ವಾಯತ್ತ), ಎನ್ ಎಸ್ ಎಸ್ ಮಂಗಳೂರು ವಿಶ್ವವಿದ್ಯಾನಿಲಯ ಸಹಭಾಗಿತ್ವದಲ್ಲಿ ನಡೆದ ವಾಕಥಾನ್-ಭಾರತಕ್ಕಾಗಿ ನಡಿಗೆ ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡುತ್ತಿದ್ದರು. ನಾವು ಆಧುನಿಕತೆಯ ಕಾಲಘಟ್ಟದಲ್ಲಿದ್ದೇವೆ. ಜಗತ್ತಿನ ವಿವಿಧ ರಾಷ್ಟ್ರಗಳೊಂದಿಗೆ ಸ್ಪರ್ಧಾತ್ಮಕವಾಗಿ ಇರುವುದು ತಪ್ಪಲ್ಲ. ಆದರೆ ನಮ್ಮತನವನ್ನು, ನಮ್ಮ ಸಂಸ್ಕೃತಿಯನ್ನು ಮರೆಯುವುದು ಸರಿಯಲ್ಲ. ವಿಶ್ವಗುರು ಭಾರತದ ಉತ್ತಮ ಶಿಷ್ಯರಾಗಿ, ಈ ದೇಶದಲ್ಲಿ ಹುಟ್ಟಿರುವ ಭಾಗ್ಯಪಡೆದಿರುವುದಕ್ಕಾಗಿ, ಅದನ್ನು ವ್ಯರ್ಥ ಮಾಡದೇ, ಭಾರತೀಯರಾಗಿ ಬದುಕೋಣ ಎಂದು ಹೇಳಿದರು.











ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ನಟ, ನಿರ್ದೇಶಕ ಸ್ವರಾಜ್ ಶೆಟ್ಟಿ, ನಾವು ಯಾರನ್ನೂ ದ್ವೇಷಿಸದೇ ಎಲ್ಲರನ್ನೂ ಪ್ರೀತಿಸುವುದನ್ನು ಕಲಿಯಬೇಕಿದೆ. ಸ್ವಚ್ಚ ಭಾರತದ ಕನಸು ಈಡೇರಬೇಕಾದರೆ ನಾವು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೇ, ನಮ್ಮ ಪರಿಸರವನ್ನು ಹಾಳು ಮಾಡದೇ ಬದುಕಬೇಕಾಗಿದೆ. ಅನೇಕ ಸಂಘ ಸಂಸ್ಥೆಗಳು ಸ್ವಚ್ಚತೆಯ ಅಭಿಯಾನದಲ್ಲಿ ತೊಡಗಿ ಮಾದರಿ ಕಾರ್ಯ ಮಾಡುತ್ತಿದ್ದಾರೆ. ಆದರೆ ಪರಿಸರ ಹಾಳಾಗಲು ಕೂಡ ನಾವೇ ಕಾರಣರಾಗಿದ್ದೇವೆ, ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು. ಸ್ವರಾಜ್ ಶೆಟ್ಟಿಯವರನ್ನು ಆಯೋಜಕರ ಪರವಾಗಿ ಸನ್ಮಾನಿಸಲಾಯಿತು.
700 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕೊಡಿಯಾಲ್ ಬೈಲ್ ನಲ್ಲಿರುವ ಕೆನರಾ ಕಾಲೇಜು ಆವರಣದಿಂದ ಹೊರಟು ಪಿವಿಎಸ್ ವೃತ್ತದ ಸಮೀಪದಿಂದ ಹಾದು ಟಿವಿ ರಮಣ್ ಪೈ ಸಭಾಂಗಣದ ತನಕ ವಾಕಥಾನ್ ಮಾಡಿ 80ನೇ ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಪೂರ್ವಭಾವಿಯಾಗಿ ನಡೆದ ಈ ಕಾರ್ಯಕ್ರಮವನ್ನು ಸಾರ್ಥಕಗೊಳಿಸಿದರು.
