ಎಸ್‌ಡಿಎಂ ಐಟಿಐ ವೇಣೂರಿನಲ್ಲಿ 41ನೇ ಬ್ಯಾಚ್‌ಗೆ ಭವ್ಯ ಚಾಲನೆ

ವೇಣೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ (ಎಸ್‌ಡಿಎಂ ಐಟಿಐ), ವೇಣೂರಿನ 41ನೇ ಬ್ಯಾಚ್‌ನ ಉದ್ಘಾಟನಾ ಸಮಾರಂಭ ಸೋಮವಾರ ಸಂಸ್ಥೆಯ ಸಭಾಂಗಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ಕ್ಷೇಮವನ, ಬೆಂಗಳೂರು ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಶ್ರದ್ಧಾ ಅಮಿತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಎಸ್‌ಡಿಎಂ ಐಟಿಐಯ ವಿದ್ಯಾರ್ಥಿಗಳು ಶಿಸ್ತು, ಸಮಯಪಾಲನೆ ಮತ್ತು ಉತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದ್ದಾರೆ. ಉದ್ಯಮಗಳಲ್ಲಿ ಉತ್ತಮ ಕೆಲಸಗಾರರಾಗಿ ಗುರುತಿಸಿಕೊಂಡಿರುವ ಈ ಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ಗುಣಮಟ್ಟವನ್ನು ಸದಾ ಉಳಿಸಿಕೊಳ್ಳಬೇಕು” ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುರಕ್ಷಾ ಕರಿಯರ್ ಅಕಾಡೆಮಿ, ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕ ರಾಮಪ್ರಸಾದ್ ರೈ ಮಾತನಾಡಿ, “ಭವಿಷ್ಯದ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ತಾಂತ್ರಿಕ ಕೌಶಲ್ಯ ಅತ್ಯಂತ ಮುಖ್ಯ. ವೃತ್ತಿ ಜೀವನದ ಆರಂಭದ ವರ್ಷಗಳಲ್ಲಿ ಸಂಬಳದ ಬಗ್ಗೆ ಹೆಚ್ಚು ಗಮನ ಹರಿಸದೆ, ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳುವುದರತ್ತ ಹೆಚ್ಚಿನ ಒತ್ತು ನೀಡಬೇಕು. ಕೌಶಲ್ಯ ಇದ್ದರೆ ಉತ್ತಮ ಅವಕಾಶಗಳು ಮತ್ತು ಉತ್ತಮ ಸಂಬಳ ತಾನಾಗಿಯೇ ದೊರೆಯುತ್ತವೆ” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪದ್ಮಂಭ ಗ್ರೂಪ್ಸ್, ವೇಣೂರು ಸಂಸ್ಥೆಯ ಮಾಲೀಕರಾದ ಜಿನರಾಜ್ ಜೈನ್ ಉಪಸ್ಥಿತರಿದ್ದು, “ವಿದ್ಯಾರ್ಥಿಗಳು ಕೇವಲ ಉದ್ಯೋಗವನ್ನು ಹುಡುಕುವವರಾಗದೆ, ಸ್ವಯಂ ಉದ್ಯೋಗ ಆರಂಭಿಸಿ ಇತರರಿಗೂ ಉದ್ಯೋಗ ನೀಡುವ ಉದ್ಯಮಿಗಳಾಗಿ ಬೆಳೆಯಬೇಕು. ಸಮಾಜಕ್ಕೆ ಉದ್ಯೋಗ ಸೃಷ್ಟಿಸುವ ಜವಾಬ್ದಾರಿಯನ್ನು ಯುವಕರು ವಹಿಸಬೇಕು” ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಂಶುಪಾಲ ವಿಶ್ವೇಶ್ವರ ಪ್ರಸಾದ್ ಕೆ.ಆರ್. ಮಾತನಾಡಿ, “ಎಸ್‌ಡಿಎಂ ಐಟಿಐ ಶಿಸ್ತು, ಗುಣಮಟ್ಟದ ತಾಂತ್ರಿಕ ಶಿಕ್ಷಣ ಹಾಗೂ ಅತ್ಯುತ್ತಮ ಕ್ಯಾಂಪಸ್ ನೇಮಕಾತಿಗೆ ಹೆಸರುವಾಸಿಯಾಗಿದೆ. ವಿದ್ಯಾರ್ಥಿಗಳು ಶಿಸ್ತು, ಕೌಶಲ್ಯ ಮತ್ತು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡರೆ ದೇಶದ ಯಾವುದೇ ಉದ್ಯಮದಲ್ಲಿ ಯಶಸ್ಸು ಸಾಧಿಸಲು ಸಾಧ್ಯ” ಎಂದು ಹೇಳಿದರು.

ಕಾರ್ಯಕ್ರಮದ ಆರಂಭದಲ್ಲಿ ಪ್ರಸನ್ನಕುಮಾರ್ ಪ್ರಾರ್ಥನೆ ನೆರವೇರಿಸಿದರು. ರತ್ನಾಕರ ರಾವ್ ಎಚ್. ಅತಿಥಿಗಳನ್ನು ಸ್ವಾಗತಿಸಿ ಸಂಸ್ಥೆಯ ಸಾಧನೆಗಳನ್ನು ಪರಿಚಯಿಸಿದರು. ಪದ್ಮಪ್ರಸಾದ್ ಬಸ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ಸತೀಶ್ ವಂದನಾರ್ಪಣೆ ಸಲ್ಲಿಸಿದರು.

Leave a Reply

Your email address will not be published. Required fields are marked *