ಕಲಾಕಾರ್ ಪುರಸ್ಕಾರ್ ಹಸ್ತಾಂತರ ಮತ್ತು ‘ಮೆಲ್ಲ್ಯಾಂಚೆ ಉಪಾದ್ರ್’ ನಾಟಕ ಪ್ರದರ್ಶನ

ಮಂಗಳೂರು: “ಫಾದರ್ ಕ್ಲೆಮೆಂಟ್ ನನ್ನ ಸಹಪಾಠಿ. ಅವರಿಗೆ ಸನ್ಮಾನ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ. ತಮ್ಮ ಸೇವೆ ಹಾಗೂ ಸಂಗೀತದ ಮೂಲಕ ಅವರು ಅನೇಕರಿಗೆ ಸ್ಪೂರ್ತಿ ನೀಡಿದ್ದಾರೆ. ಕಲಾವಿದರನ್ನು ಗೌರವಿಸುವುದು ಸಮಾಜದ ಕರ್ತವ್ಯ ಮತ್ತು ಈ ಕರ್ತವ್ಯವನ್ನು ಕಳೆದ 22 ವರ್ಷಗಳಿಂದ ಕಾರ್ವಾಲ್ ಮನೆತನ ಹಾಗೂ ಮಾಂಡ್ ಸೊಭಾಣ್ ಪಾಲಿಸಿಕೊಂಡು ಬಂದಿವೆ. ನಾವೆಲ್ಲರೂ ಕೈಜೋಡಿಸಿದರೆ ನಮ್ಮ ಭಾಷೆ ಮತ್ತು ಸಂಸ್ಕೃತಿ ಭವಿಷ್ಯದಲ್ಲಿಯೂ ಬೆಳಗಲಿದೆ” ಎಂದು ಅಬುದಾಬಿಯ ಹಿಸ್ನಾ ಇಂಟರ್‌ನ್ಯಾಷನಲ್ ಎಲ್.ಎಲ್.ಸಿ. ಮಾಲೀಕ ಹಾಗೂ ಭಾಷಾಭಿಮಾನಿ ರೊನಾಲ್ಡ್ ಪಿಂಟೊ ಹೇಳಿದರು. ಅವರು ನ. 01 ರಂದು ಕಲಾಂಗಣದಲ್ಲಿ ಆಯೋಜಿಸಲಾಗಿದ್ದ 22ನೇ ಕಲಾಕಾರ್ ಪುರಸ್ಕಾರ್ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಂದನೀಯ ಫಾದರ್ ಕ್ಲೆಮೆಂಟ್ ಮಸ್ಕರೇನ್ಹಸ್ ಅವರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.

ಶಾಲು, ಹಾರ, ಫಲವಸ್ತು, ಸ್ಮರಣಿಕೆ, ಸನ್ಮಾನ ಪತ್ರ ಮತ್ತು ರೂ. 50,000 ಗಳ ಚೆಕ್ ಅನ್ನು ವೇದಿಕೆಯ ಮೇಲಿದ್ದ ಗಣ್ಯರಿಂದ ಸ್ವೀಕರಿಸಿದ ಸಂಗೀತಗಾರ ಫಾದರ್ ಕ್ಲೆಮೆಂಟ್ ಅವರು, ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ ತಮ್ಮ ಸಂಗೀತ ಪಯಣದ ಕುರಿತು ಬೆಳಕು ಚೆಲ್ಲಿದರು. ತಮ್ಮ ಸಹ-ಸಂಗೀತಗಾರ ದಿವಂಗತ ಫಾದರ್ ವಲೇರಿಯನ್ ಮೆಂಡೋನ್ಸಾ ಅವರನ್ನು ಸ್ಮರಿಸಿದ ಅವರು, ತಮಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕಾರ್ವಾಲ್ ಮನೆತನ ಮತ್ತು ಪುರಸ್ಕಾರದ ಕುರಿತು ಕಾರ್ವಾಲ್ ಕುಟುಂಬದ ಪ್ರತಿನಿಧಿ ವಂದನೀಯ ಡಾ. ಪ್ರತಾಪ್ ನಾಯ್ಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ, ಕಾರ್ಯದರ್ಶಿ ರೊನಿ ಕ್ರಾಸ್ತಾ ಉಪಸ್ಥಿತರಿದ್ದರು. ಸದಸ್ಯೆ ಲವೀನಾ ದಾಂತಿ ಸನ್ಮಾನ ಪತ್ರವನ್ನು ವಾಚಿಸಿದರು. ವಿತೊರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬಳಿಕ ಅಬುಧಾಬಿಯ ಡೊರೊತಿ ಪಿಂಟೊ ಅವರು ಗಂಟೆ ಬಾರಿಸುವ ಮೂಲಕ 299ನೇ ‘ಮಾಂಚಿ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಲಾಂಗಣ ಸಮಿತಿಯ ಅಧ್ಯಕ್ಷ ರೊನಾಲ್ಡ್ ಮೆಂಡೋನ್ಸಾ ಉಪಸ್ಥಿತರಿದ್ದರು.

ನಂತರ ನೆಲ್ಲು ಪೆರ್ಮನ್ನೂರು ಬರೆದು ನಿರ್ದೇಶಿಸಿದ, ಕಾಮಿಡಿ ಕಂಪೆನಿ ಪ್ರಸ್ತುತಪಡಿಸಿದ ‘ಮೆಲ್ಲ್ಯಾಂಚೆ ಉಪಾದ್ರ್’ (ಸತ್ತವರ ಕಾಟ) ಎಂಬ ಹೊಸ ಹಾಸ್ಯ ನಾಟಕದ ಮೊದಲ ಪ್ರದರ್ಶನ ನಡೆಯಿತು. ಈ ಬಾರಿಯೂ ಕಲಾಂಗಣದ ಬಯಲು ರಂಗ ಮಂದಿರ ತುಂಬಿ ತುಳುಕಿ, ಜಾಗವಿಲ್ಲದೆ ಹಿಂದಿರುಗುವಷ್ಟರ ಮಟ್ಟಿಗೆ ಜನಸಂದಣಿ ಸೇರಿ ಕಲಾವಿದರನ್ನು ಪ್ರೋತ್ಸಾಹಿಸಿದರು.

Leave a Reply

Your email address will not be published. Required fields are marked *