ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆಯ ಮೇಲೆ ಬಲಪ್ರಯೋಗ ಖಂಡನೀಯ: ಉದಯ ಶೆಟ್ಟಿ ಮುನಿಯಾಲು

ಕಾರ್ಕಳ: NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ಸಂತ್ರಸ್ತರಾದ ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕೆ ನ್ಯಾಯ ಕೋರಿ ಕೇಂದ್ರ ಸರ್ಕಾರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ವಿರುದ್ಧ ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಆಡಳಿತವು ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ನಡೆಸಿರುವುದು ಅತ್ಯಂತ ಖಂಡನೀಯ ಮತ್ತು ಅಘಾತಕಾರಿ ಬೆಳವಣಿಗೆಯಾಗಿದೆ.

ವಿದ್ಯಾರ್ಥಿಗಳು ದೇಶದ ಭವಿಷ್ಯದ ಆಶಾಕಿರಣಗಳಾಗಿದ್ದಾರೆ. ಅವರು ಯಾವುದೇ ರಾಜಕೀಯ ಅಧಿಕಾರವನ್ನು ಕೇಳುತ್ತಿಲ್ಲ; ತಮ್ಮ ಶಿಕ್ಷಣ, ಪರಿಶ್ರಮ ಮತ್ತು ಭವಿಷ್ಯಕ್ಕೆ ನ್ಯಾಯ ದೊರಕಬೇಕು ಎಂಬ ನ್ಯಾಯಸಮ್ಮತ ಬೇಡಿಕೆಯನ್ನು ಮಾತ್ರ ಮುಂದಿಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಧ್ವನಿಯನ್ನು ಆಲಿಸುವ ಬದಲು ಬಲಪ್ರಯೋಗಕ್ಕೆ ಮುಂದಾಗಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ.

ಆಡಳಿತವು ಜನರ ಭಾವನೆಗಳಿಗೆ ಸ್ಪಂದಿಸುವ ವಿಶಾಲ ಮನೋಭಾವವನ್ನು ಹೊಂದಿರಬೇಕು. ಆಡಳಿತದ ವೈಫಲ್ಯಗಳ ವಿರುದ್ಧ ಧ್ವನಿ ಎತ್ತುವ ಪ್ರತಿಯೊಬ್ಬರನ್ನೂ ದೇಶದ್ರೋಹಿಗಳೆಂದು ಬಿಂಬಿಸುವ ಪ್ರವೃತ್ತಿ ಅತ್ಯಂತ ಖಂಡನೀಯ. ಮುಗ್ಧ ವಿದ್ಯಾರ್ಥಿಗಳನ್ನು ರಾಜಕೀಯ ಕಾರಣಗಳಿಗಾಗಿ ದೇಶದ್ರೋಹಿಗಳೆಂದು ಕರೆಯುವುದು ದೇಶದ ಸಾಮಾಜಿಕ ಸೌಹಾರ್ದತೆ ಮತ್ತು ಪ್ರಜಾಪ್ರಭುತ್ವದ ದೃಷ್ಟಿಯಿಂದ ಅಪಾಯಕಾರಿ ಬೆಳವಣಿಗೆಯಾಗಿದೆ. ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು ಎಂಬುದನ್ನು ಕೇಂದ್ರ ಸರ್ಕಾರ ಮರೆಯಬಾರದು.

ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ತನ್ನ ಹಕ್ಕುಗಳಿಗಾಗಿ ಶಾಂತಿಯುತವಾಗಿ ಧ್ವನಿ ಎತ್ತುವ ಹಕ್ಕನ್ನು ನೀಡಿದೆ. ಆದ್ದರಿಂದ ಶಾಂತಿಯುತ ಪ್ರತಿಭಟನೆಯ ಮೇಲೆ ಬಲಪ್ರಯೋಗ ನಡೆಸುವುದು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ.

ಕೇಂದ್ರ ಸರ್ಕಾರವು ತನ್ನ ಹಠವನ್ನು ಬದಿಗೊತ್ತಿ, ವಿದ್ಯಾರ್ಥಿಗಳ ನ್ಯಾಯಯುತ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ, ಅವರ ಭವಿಷ್ಯದ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ರವರು ಈ ಮೂಲಕ ಆಗ್ರಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *