ರೂಪ ನೋಡುವ ವಿಕೃತ ಸಮಾಜದ ಕಣ್ಣು ತೆರೆಸುವ ಸತ್ಯ: ಪ್ರಾಚಿ ನಿಗಮ್ ಗೆಲುವಿನ ಕಥೆ! – Article By Naveen Habib

ಸಮಾಜದ ಕಟ್ಟುಪಾಡುಗಳು, ನಿರೀಕ್ಷೆಗಳು ಮತ್ತು ಸೌಂದರ್ಯದ ಸಾಂಪ್ರದಾಯಿಕ ವ್ಯಾಖ್ಯಾನಗಳನ್ನು ಮೀರಿ ನಿಲ್ಲುವವರು ಮಾತ್ರ ನಿಜವಾದ ಇತಿಹಾಸ ಸೃಷ್ಟಿಸುತ್ತಾರೆ. 

ಇಂದಿನ ಡಿಜಿಟಲ್ ಯುಗದಲ್ಲಿ ಸೌಂದರ್ಯದ ಅಳತೆಗೋಲುಗಳು ತುಂಬಾ ಕಿರಿದಾಗಿವೆ. ಮುಖದ ಮೇಲಿನ ನಗು, ಕಣ್ಣುಗಳಲ್ಲಿನ ಕಾಂತಿ ಅಥವಾ ಬೆವರಿನ ಹನಿಗಳನ್ನು ಗುರುತಿಸದ ನಮ್ಮ ಆಧುನಿಕ ಸಮಾಜವು, ವ್ಯಕ್ತಿಯ ಬಾಹ್ಯ ರೂಪವನ್ನು ಕಂಡು ತೀರ್ಪು ನೀಡಲು ಧಾವಿಸುತ್ತದೆ. ಆದರೆ ನಿಜವಾದ ಯಶಸ್ಸು ಕೇವಲ ಹೊಳಪಿನ ಮುಖದಲ್ಲಲ್ಲ, ಬದಲಿಗೆ ಕಠಿಣ ಪರಿಶ್ರಮ, ಛಲ ಮತ್ತು ಬದ್ಧತೆಯಿಂದ ರೂಪುಗೊಳ್ಳುತ್ತದೆ.

ಉತ್ತರ ಪ್ರದೇಶದ 10ನೇ ತರಗತಿಯ ಬೋರ್ಡ್ ಪರೀಕ್ಷೆಯಂತಹ ಅತ್ಯಂತ ಕಠಿಣ ಮತ್ತು ಸವಾಲಿನ ಶೈಕ್ಷಣಿಕ ವಾತಾವರಣದಲ್ಲಿ “”{600/591}””ಅಂಕಗಳಿಂದ  ಅಗ್ರಸ್ಥಾನ ಪಡೆದ ಪ್ರಾಚಿ ನಿಗಮ್ ಅವರ ಕಥೆಯು ಇಂತಹ ಅನೇಕ ಸಾಮಾಜಿಕ ಪೂರ್ವಗ್ರಹಗಳಿಗೆ ಕನ್ನಡಿ ಹಿಡಿಯುತ್ತದೆ. ಒಂದು ಕಡೆ ಅಸಾಧಾರಣ ಪ್ರತಿಭೆ ಮತ್ತು ಶ್ರಮದ ವಿಜಯೋತ್ಸವವಿರಬೇಕಾದ ಜಾಗದಲ್ಲಿ, ನಮ್ಮ ಸಮಾಜವು ಅವರ ಮುಖದ ಮೇಲಿನ ಸ್ವಾಭಾವಿಕ ದೈಹಿಕ ಲಕ್ಷಣಗಳನ್ನು ಗುರಿಯಾಗಿಸಿ ಟ್ರೋಲ್ ಮಾಡಿದ ಪರಿಣಾಮ, ನಮ್ಮ ಯೋಚನಾ ಲಹರಿಯ ದಿವಾಳಿತನವನ್ನು ಎತ್ತಿ ತೋರಿಸುತ್ತದೆ. ಆದರೂ, ಎಲ್ಲ ವಿವಾದಗಳ ನಡುವೆ ಪ್ರಾಚಿ ತೋರಿಸಿದ ಧೈರ್ಯ, ಆತ್ಮವಿಶ್ವಾಸ ಮತ್ತು ಪ್ರಬುದ್ಧತೆಯು ಇಡೀ ಯುವ ಪೀಳಿಗೆಗೆ ಮಾತ್ರವಲ್ಲದೆ, ಕಿರಿದಾದ ಮನಸ್ಥತಿಯ ಸಮಾಜಕ್ಕೂ ಒಂದು ದೊಡ್ಡ ಪಾಠವಾಗಿದೆ. 

ಸಾಮಾಜಿಕ ಜಾಲತಾಣಗಳ ಅತಿಯಾದ ಪ್ರಭಾವ ಮತ್ತು ಆನ್‌ಲೈನ್ ಆತಂಕಗಳ ಮಧ್ಯೆ ಒಬ್ಬ ಹೆಣ್ಣುಮಗಳು ಹೇಗೆ ತನ್ನ ಸ್ವಾಭಿಮಾನವನ್ನು ಕಾಪಾಡಿಕೊಳ್ಳಬಹುದು ಎಂಬುದಕ್ಕೆ ಪ್ರಾಚಿ ಅವರ ಜೀವನದ ಈ ಘಟನೆಯು ಅತ್ಯುತ್ತಮ ಉದಾಹರಣೆಯಾಗಿದೆ.

ವಿಷಯದ ವಿವರಣೆ

ಉತ್ತರ ಪ್ರದೇಶ ಬೋರ್ಡ್ ಪರೀಕ್ಷೆಯು ದೇಶದಲ್ಲೇ ಅತ್ಯಂತ ಕಠಿಣ ಮತ್ತು ಶಿಸ್ತಿನ ಮೌಲ್ಯಮಾಪನ ಹೊಂದಿರುವ ಬೋರ್ಡ್‌ಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ… ಲಕ್ಷಾಂತರ ವಿದ್ಯಾರ್ಥಿಗಳು ಕಠಿಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಈ ಪರೀಕ್ಷೆಯಲ್ಲಿ ಟಾಪ್ ಮಾಡುವುದು ಎಂದರೆ ಸಾಮಾನ್ಯ ಮಾತಲ್ಲ. ನಿರಂತರ ಅಧ್ಯಯನ, ಏಕಾಗ್ರತೆ ಮತ್ತು ದೃಢಸಂಕಲ್ಪವಿದ್ದರೆ ಮಾತ್ರ ಇದು ಸಾಧ್ಯ. ಪ್ರಾಚಿ ನಿಗಮ್ ಈ ಕಠಿಣ ಸವಾಲನ್ನು ಗೆದ್ದು, ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಾಗ, ಆಕೆಯ ಯಶಸ್ಸನ್ನು ಕೊಂಡಾಡಬೇಕಿದ್ದ ಸಮಾಜವು ಆಕೆಯ ಮುಖದ ಮೇಲಿನ ಮೀಸೆ ಮತ್ತು ಗಡ್ಡದ (ಮೃದುವಾದ ಕೂದಲುಗಳ) ಬಗ್ಗೆ ಚರ್ಚೆ ಆರಂಭಿಸಿತು.

ಪ್ರಾಚಿ ಅವರ ಸಂದರ್ಶನಗಳು ಪ್ರಸಾರವಾದಾಗ, ಬಹುತೇಕ ಚರ್ಚೆಗಳು ಆಕೆಯ ಸಾಧನೆಯ ಮೇಲಿರಲಿಲ್ಲ. ಬದಲಾಗಿ, “ಆಕೆಯ ಮುಖದ ಮೇಲೆ ಏಕೆ ಕೂದಲುಗಳಿವೆ?” ಎಂಬ ಅಸಂಬದ್ಧ ಮತ್ತು ಕೀಳು ಮಟ್ಟದ ಪ್ರಶ್ನೆಗಳು ಎದ್ದವು. ಆಕೆಯ ತಪಸ್ಸು, ರಾತ್ರಿ ಪೂರ್ತಿ ಓದಿದ ಪರಿಶ್ರಮ, ಆಕೆಯ ಪೋಷಕರ ಬೆಂಬಲ ಎಲ್ಲವನ್ನೂ ಬದಿಗಿಟ್ಟು, ಸೌಂದರ್ಯದ ಸೋಗಿನಲ್ಲಿ ಆಕೆಯನ್ನು ಅಪಹಾಸ್ಯ ಮಾಡಲಾಯಿತು. ಇದು ನಮ್ಮ ಸಾಮಾಜಿಕ ಮೌಲ್ಯಗಳ ಕುಸಿತವನ್ನು ತೋರಿಸುತ್ತದೆ.

ಪ್ರಾಂಚಿಯ ಅಂತರಂಗದ ನೋವು ಮತ್ತು ದಿಟ್ಟ ಉತ್ತರ

ಈ ರೀತಿಯ ಕ್ರೂರ ಟ್ರೋಲಿಂಗ್‌ನಿಂದ ನೊಂದ ಪ್ರಾಚಿ, ಎರಡು ದಿನಗಳ ಬಳಿಕ ನೀಡಿದ ಒಂದು  ಸಂದರ್ಶನದಲ್ಲಿ ಅತಿ ದುಃಖದಿಂದ ಹೇಳಿದಳು, “”ನನ್ನ ಮನಸ್ಸು ಹೇಳುತ್ತಿದೆ, ನಾನು ಟಾಪ್ ಮಾಡದೇ ಇದ್ದಿದ್ದರೆ ಒಳ್ಳೆಯದಿತ್ತು” ಎಂದು ಹೇಳಿದರು. ಇದು ಕೇವಲ ಪ್ರಾಚಿಯ ನೋವಾಗಿರಲಿಲ್ಲ, ಬದಲಿಗೆ ನಮ್ಮ ಸಮಾಜದ ಮುಖದ ಮೇಲೆ ಬಿದ್ದ ತೀಕ್ಷ್ಣವಾದ ಕಪಾಳಮೋಕ್ಷವಾಗಿತ್ತು. 

“ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿಯ ಯಶಸ್ಸಿನ ಖುಷಿಯನ್ನು ಕಸಿದುಕೊಂಡು, ಆಕೆಯನ್ನು ಕಣ್ಣೀರು ಹಾಕುವಂತೆ ಮಾಡಿದ ಸಮಾಜದ ಕ್ರೌರ್ಯಕ್ಕೆ ಇದು ಸಾಕ್ಷಿಯಾಯಿತು.””

ಆದರೆ ಪ್ರಾಚಿ ಅಲ್ಲಿಗೆ ನಿಲ್ಲಲಿಲ್ಲ. ಕೇವಲ ಎರಡು ದಿನಗಳ ನಂತರ ಆಕೆ ಮತ್ತೊಮ್ಮೆ ಮಾಧ್ಯಮದ ಮುಂದೆ ಬಂದಾಗ, ಆಕೆಯಲ್ಲಿದ್ದ ಪರಿವರ್ತನೆ ಮತ್ತು ಆತ್ಮವಿಶ್ವಾಸ ಎಲ್ಲರಿಗೂ ಅಚ್ಚರಿ ಮೂಡಿಸಿತು. ಆಕೆ ಅತ್ಯಂತ ಧೈರ್ಯದಿಂದ ಹೇಳಿದಳು, ” ನನ್ನ ಮುಖದ ಮೀಸೆ ಗಡ್ಡದ ಬಗ್ಗೆ ಟ್ರೋಲಿಂಗ್ ತುಂಬಾ ಆಯಿತು, ಆದರೆ ನನಗೆ ಇದರಿಂದ ಯಾವುದೇ ವಿಶೇಷ ವ್ಯತ್ಯಾಸವಾಗಿಲ್ಲ. ನಾನು ಚೆನ್ನಾಗಿದ್ದೇನೆ ಮತ್ತು ಈ ನೆಪದಿಂದ  ನಾನು ಪ್ರಸಿದ್ಧಳೂ ಆಗಿದ್ದೇನೆ ಎಂದು ನಕ್ಕಳು..ಮುಂದುವರೆದು,,, ಇನ್ನು ನನ್ನ ಮುಖದ ಮೀಸೆ ಮತ್ತು ಗಡ್ಡದ ವಿಚಾರಕ್ಕೆ ಬಂದರೆ, ನನಗೆ ಯಾವಾಗ ಅನಿಸುತ್ತದೋ ಆಗ ಅದನ್ನು ಸರಿಪಡಿಸಿಕೊಳ್ಳುತ್ತೇನೆ” ಎಂದು ದಿಟ್ಟ ಉತ್ತರ ನೀಡಿದರು.

ಸಾಮಾಜಿಕ ಜಾಲತಾಣಗಳ ಆತಂಕ ಮತ್ತು ಪೋಷಕರ ಪಾತ್ರ

ಇಂದಿನ ಕಾಲದಲ್ಲಿ ‘ಸೋಷಿಯಲ್ ಮೀಡಿಯಾ ಆಂಗ್ಜೈಟಿ’ (Social Media Anxiety) ಅಥವಾ ಸಾಮಾಜಿಕ ಜಾಲತಾಣದ ಆತಂಕವು ಯುವ ಜನರನ್ನು ಕಾಡುತ್ತಿರುವ ದೊಡ್ಡ ಕಾಯಿಲೆಯಾಗಿದೆ. ಇನ್ಸ್ಟಾಗ್ರಾಮ್,, ಫೇಸ್ಬುಕ್ ನಲ್ಲಿ  ಫೋಟೋಗಳಿಗೆ ಲೈಕ್‌ಗಳು ಬಂದಿಲ್ಲವೆಂದೋ ಅಥವಾ ಸಮಾಜದ ಟೀಕೆಗಳನ್ನು ಎದುರಿಸಲಾಗದೆಯೋ ಮಕ್ಕಳು ಕುಗ್ಗಿ ಹೋಗುತ್ತಾರೆ…ಅಂತದ್ರಲ್ಲಿ  ಲಕ್ಷಾಂತರ ಜನರು ಟ್ರೋಲ್ ಮಾಡಿದರೂ, ಅಷ್ಟು ದೊಡ್ಡ ಮಟ್ಟದ ನೆಗೆಟಿವಿಟಿಯನ್ನು ಎದುರಿಸಿ, “ನನಗೆ ಇದರಿಂದ ಯಾವುದೇ ತೊಂದರೆಯಾಗಿಲ್ಲ” ಎಂದು ನಗುತ್ತಾ ಹೇಳಲು ಸಾಧ್ಯವಾಯಿತು ಎಂದರೆ, ಆಕೆಯ ಹಿಂದೆ ಆಕೆಯ ಪೋಷಕರ ಅಮೂಲ್ಯವಾದ ಸಂಸ್ಕಾರ ಮತ್ತು ಬೆಂಬಲವಿದೆ ಎಂದರ್ಥ ಮಗಳಿಗೆ ಬಾಲ್ಯದಿಂದಲೇ ನೀಡಿರುವ ಮಾನಸಿಕ ಸ್ಥೈರ್ಯವೇ ಇಂದು ಪ್ರಾಚಿಯನ್ನು ಇಷ್ಟು ಗಟ್ಟಿಯಾಗಿ ನಿಲ್ಲುವಂತೆ ಮಾಡಿದೆ.

ನಿಷ್ಕರ್ಷ

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಾಚಿ ನಿಗಮ್ ಅವರ ಈ ಸಂಪೂರ್ಣ ಪ್ರಯಾಣವು ಕೇವಲ ಒಬ್ಬ ವಿದ್ಯಾರ್ಥಿನಿಯ ಶೈಕ್ಷಣಿಕ ಯಶಸ್ಸಿನ ಕಥೆಯಲ್ಲ, ಬದಲಿಗೆ ಇಂದಿನ ಡಿಜಿಟಲ್ ಯುಗದಲ್ಲಿ ಆತ್ಮವಿಶ್ವಾಸ ಮತ್ತು ದೃಢತೆಯ ಸಂಕೇತವಾಗಿದೆ.

“”ಸಮಾಜವು ನಮ್ಮನ್ನು ಹೇಗೆ ನೋಡುತ್ತದೆ ಎಂಬುದಕ್ಕಿಂತ, ನಾವು ನಮ್ಮನ್ನು ಹೇಗೆ ನಂಬುತ್ತೇವೆ ಎಂಬುದು ಮುಖ್ಯ ಎಂಬುದನ್ನು ಪ್ರಾಚಿ ಸಾಬೀತುಪಡಿಸಿದ್ದಾರೆ.””

ನಕಾರಾತ್ಮಕ ಟೀಕೆಗಳು ಮತ್ತು ಟ್ರೋಲ್‌ಗಳು ನಮ್ಮನ್ನು ಕುಗ್ಗಿಸುವ ಬದಲು, ನಮ್ಮ ಗುರಿಯತ್ತ ಮತ್ತಷ್ಟು ಗಟ್ಟಿಯಾಗಿ ಹೆಜ್ಜೆ ಇಡಲು ಸ್ಪೂರ್ತಿಯಾಗಬೇಕು. ಪ್ರಾಚಿ ನಿಗಮ್ ತಮ್ಮ ಅಸಾಧಾರಣ ಪ್ರತಿಭೆ ಮತ್ತು ಅದಕ್ಕಿಂತ ಹೆಚ್ಚಾಗಿ ಆಕೆಯ ಅದ್ಭುತ ಮಾನಸಿಕ ಸ್ಥೈರ್ಯದಿಂದ ಇಡೀ ಸಮಾಜಕ್ಕೆ ದೊಡ್ಡ ಪಾಠ ಕಲಿಸಿದ್ದಾರೆ. ಇಂತಹ ಮಕ್ಕಳನ್ನು ಬೆಳೆಸಿದ ಪೋಷಕರ ಹೆಮ್ಮೆಯ ಸಾಕ್ಷಿಯಾಗಿ, ಮತ್ತು ನೊಂದರೂ ಗೆದ್ದು ನಿಲ್ಲುವ ಛಲದ ಪ್ರತೀಕವಾಗಿ ಪ್ರಾಚಿ ನಿಗಮ್ ಎಂದೆಂದಿಗೂ ಸ್ಫೂರ್ತಿದಾಯಕರಾಗಿದ್ದಾರೆ…

“ಕೇವಲ ಜನ ನನ್ನ ಬಗ್ಗೆ ಒಳ್ಳೆಯದು ಮಾತನಾಡಲಿ, ಒಳ್ಳೆಯದು ಯೋಚಿಸಲೆಂದು, ನಮ್ಮ ಪೂರ್ಣ ಜೀವನವನ್ನು ಪಣಕ್ಕಿಟ್ಟು ಹಾಳು ಮಾಡಿಕೊಳ್ಳೋದಕ್ಕಿಂತ,,,,

ಅದರ ಬದಲಾಗಿ ಜನ ನಮಗೆ ನಾಲ್ಕು ಮಾತು ಬೈದು, ಆಡ್ಕೊಂಡ್ರು ಪರವಾಗಿಲ್ಲ;

ನಾನು ನನ್ನ ಜೀವನವನ್ನು ಸರಿಪಡಿಸಿಕೊಳ್ಳುವ ಒಂದು ಪ್ರಯತ್ನ ಮಾಡುತ್ತೇನೆ.. ಅನ್ನೋ ವಿಚಾರ ಉತ್ತಮ…”

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಕೇಳಲು ನವೀನ್ ಹಬೀಬ್ ರವರು ಈ ಲೇಖನದ ಮೂಲಕ ಕೇಳಿಕೊಂಡಿದ್ದಾರೆ.

{ ನವೀನ್ ಹಬೀಬ್ ಶಿಕ್ಷಕರು ಹಾಗೂ ಪ್ರೇರಕ ಭಾಷಣಕಾರರು }

Leave a Reply

Your email address will not be published. Required fields are marked *