ಪಿ.ವಿ. ಪ್ರದೀಪ್ ಕುಮಾರ್ ಅವರ ಕಲ್ಪನೆ ಹಾಗೂ ಸಾರಥ್ಯದಲ್ಲಿ ‘ಅದಿತಿ’ ಚಲನಚಿತ್ರ ಬಿಡುಗಡೆ

ಸಾಹಿತ್ಯ ಲೋಕದಲ್ಲಿ ಕಳೆದ ಎರಡು ದಶಕಗಳಿಂದ ತಮ್ಮ ಸೃಜನಶೀಲ ಬರವಣಿಗೆಯ ಮೂಲಕ ಕನ್ನಡಿಗರ ಮನಗೆದ್ದಿರುವ ಖ್ಯಾತ ಲೇಖಕ ಹಾಗೂ ಕಾದಂಬರಿಕಾರ ಪಿ.ವಿ. ಪ್ರದೀಪ್ ಕುಮಾರ್ ಅವರ ಕಲ್ಪನೆ ಮತ್ತು ಸಾರಥ್ಯದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಚಲನಚಿತ್ರ ‘ಅದಿತಿ’ ಇಂದು ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆಗೊಂಡಿತು.

ಪಿಬಿ ಹರೀಶ್ ರೈ, ಅಧ್ಯಕ್ಷರು ಪತ್ರಿಕಾ ಭವನ ಮಂಗಳೂರು ‘ಅದಿತಿ’ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ, ಮಾತನಾಡಿದ ಇವರು “ಪಿ.ವಿ. ಪ್ರದೀಪ್ ಕುಮಾರ್ ಅವರು ಈವರೆಗೆ 50ಕ್ಕೂ ಹೆಚ್ಚು ಕಾದಂಬರಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವುಗಳಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳು ‘ಸುಧಾ’, ‘ತರಂಗ’, ‘ಮಂಗಳ’, ‘ಕರ್ಮವೀರ’ ಸೇರಿದಂತೆ ರಾಜ್ಯದ ಜನಪ್ರಿಯ ವಾರಪತ್ರಿಕೆಗಳು ಮತ್ತು ಮಾಸಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಲಕ್ಷಾಂತರ ಓದುಗರ ಮೆಚ್ಚುಗೆ ಗಳಿಸಿವೆ. ಅವರ ಜನಪ್ರಿಯ ಕಾದಂಬರಿ ‘ಮರಣ ಶಾಸನ’ ತೆಲುಗು ಭಾಷೆಗೆ ಅನುವಾದಗೊಂಡು ಅಲ್ಲಿಯೂ ಓದುಗರ ಬಳಗವನ್ನು ಹೊಂದಿದೆ.”

ಈ ಸಂದರ್ಭದಲ್ಲಿ ಮಾತನಾಡಿದ ಪಿ.ವಿ. ಪ್ರದೀಪ್ ಕುಮಾರ್, “ನನ್ನ 50 ಕಾದಂಬರಿಗಳ ಸಾಹಿತ್ಯ ಕೃಷಿಗೆ ಆರಂಭದಿಂದಲೂ ಮಾಧ್ಯಮ ಮಿತ್ರರು ನೀಡಿದ ಪ್ರೋತ್ಸಾಹ ಅಮೂಲ್ಯವಾಗಿದೆ. ಈಗ ‘ಅದಿತಿ’ ಚಿತ್ರದ ಮೂಲಕ ಚಿತ್ರರಂಗದ ಹೊಸ ಪಯಣಕ್ಕೆ ಕಾಲಿಡುತ್ತಿದ್ದೇನೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ, ಹೊಸ ತಂತ್ರಜ್ಞಾನವಾದ ಎಐ (AI) ಸಹಾಯದೊಂದಿಗೆ ಚಿತ್ರದ ದೃಶ್ಯಗಳನ್ನು ಕಲ್ಪಿಸಿಕೊಳ್ಳಲಾಗಿದೆ. ಕಥೆಗಾರನ ಕಲ್ಪನೆಗೆ ತಂತ್ರಜ್ಞಾನ ಸಾಥ್ ನೀಡಿದಾಗ ‘ಅದಿತಿ’ ಹೇಗೆ ರೂಪುಗೊಂಡಿದ್ದಾಳೆ ಎಂಬುದನ್ನು ಜನರ ಮುಂದೆ ತರುವ ಹೆಮ್ಮೆ ನನಗಿದೆ.”

ಚಲನಚಿತ್ರದ ಕುರಿತು:
ಈ ಹಿಂದೆ ವಿಭಿನ್ನ ಕಥಾಹಂದರದ ‘ಬದಲಾಗದವರು’ ಕಿರುಚಿತ್ರವನ್ನು ಯಶಸ್ವಿಯಾಗಿ ನಿರ್ದೇಶಿಸಿದ್ದ ಪಿ.ವಿ. ಪ್ರದೀಪ್ ಕುಮಾರ್, ಇದೀಗ ದೊಡ್ಡ ಕ್ಯಾನ್ವಾಸ್‌ನಲ್ಲಿ ತಮ್ಮ ಎರಡನೇ ಚಿತ್ರ ‘ಅದಿತಿ’ಯನ್ನು ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ.’ “ನಾರಿ ಮುನಿದರೆ ಸಾಮ್ರಾಜ್ಯವೇ ಧೂಳಿಪಟ” ಎಂಬ ಬಲಿಷ್ಠ ಟ್ಯಾಗ್‌ಲೈನ್ ಹೊಂದಿರುವ ‘ಅದಿತಿ’ ಚಿತ್ರವು ಸಸ್ಪೆನ್ಸ್, ಆಕ್ಷನ್ ಹಾಗೂ ಭಾವನಾತ್ಮಕ ಪ್ರೇಮಕಥೆಯ ವಿಶಿಷ್ಟ ಸಂಯೋಜನೆಯಾಗಿದೆ. ಕಥೆಗೆ ಪೂರಕವಾದ ರಹಸ್ಯಗಳು, ಕುತೂಹಲ ಕೆರಳಿಸುವ ತಿರುವುಗಳು ಹಾಗೂ ಮನಮುಟ್ಟುವ ಪ್ರೇಮಕಥೆ ಚಿತ್ರದ ಪ್ರಮುಖ ಆಕರ್ಷಣೆಯಾಗಿವೆ.

ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಪೋಸ್ಟರ್‌ನಲ್ಲಿ ಮುಖ್ಯ ಪಾತ್ರಧಾರಿಗಳ ತೀವ್ರ ಭಾವನೆಗಳು, ಆಧುನಿಕ ತಂತ್ರಜ್ಞಾನದ ಅಂಶಗಳು, ಹಿನ್ನೆಲೆಯಲ್ಲಿನ ಸಸ್ಪೆನ್ಸ್ ಛಾಯೆಗಳು ಹಾಗೂ ಪಾತ್ರಗಳ ಗಂಭೀರ ನೋಟಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಸಾಹಿತ್ಯಿಕ ಆಳ ಮತ್ತು ಸಿನೆಮ್ಯಾಟಿಕ್ ದೃಶ್ಯ ವೈಭವದ ಸಂಗಮವಾಗಿರುವ ‘ಅದಿತಿ’ ಚಿತ್ರವು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.

ರೇಮಂಡ್ ಡಿಕುನಾ ತಾಕೊಡೆ ಹಿರಿಯ ಪತ್ರಕರ್ತ, ಸಂಪಾದಕರು ಪಿಂಗಾರ ಪತ್ರಿಕೆ, ಧರ್ಮದಶಿ ಡಾ. ಹರಿಕೃಷ್ಣ ಪುನರೂರು, ಮಾಜಿ ಕಸಾಪ ರಾಜ್ಯಾಧ್ಯಕ್ಷರು ಮತ್ತು ಸುನಿತಾ ಪ್ರದೀಪ್ ಕುಮಾರ್, ನಿರ್ಮಾಪಕರು ಅದಿತಿ ಚಿತ್ರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *