ಮಂಗಳೂರು: ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸರ್ವಧರ್ಮ ಸಹಿಷ್ಣುತೆ ಮುಂತಾದ ಉದಾತ್ತ ಚಿಂತನೆಗಳನ್ನು ಒಳಗೊಂಡ ಶ್ರೇಷ್ಠ ಸಂವಿಧಾನವನ್ನು ಬಾಬಾ ಸಾಹೇಬರು ನಮಗೆ ನೀಡಿದ್ದಾರೆ. ಸಂವಿಧಾನದ ಈ ಆಶಯಗಳಂತೆ ಬದುಕುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದ್ದಾರೆ.







ನಗರದ ಮಲ್ಲಿಕಟ್ಟೆಯ ಕಾಂಗ್ರಸ್ ಭವನದಲ್ಲಿ ಮಂಗಳವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಅಂಬೇಡ್ಕರ್ ದೇಶದ ಸಂವಿಧಾನ ಸೃಷ್ಟಿಕರ್ತ. ಸರ್ವರಿಗೂ ಸಮಾನ ನ್ಯಾಯ ಸಿಗಬೇಕು, ಸ್ವಾವಲಂಬಿಗಳಾಗಬೇಕು ಎನ್ನುವುದು ಅಂಬೇಡ್ಕರರ ಆಶಯವಾಗಿತ್ತು. ಅಂಬೇಡ್ಕರ್ ಕೇವಲ ದಲಿತರಿಗಷ್ಟೇ ಅಲ್ಲ, ಭಾರತದ ಪ್ರತಿ ಪ್ರಜೆಗೂ ದೇವರ ಸ್ವರೂಪ. ದೇಶದ ಜನತೆ ಸಮಾನತೆಯಿಂದ ಬಾಳುತ್ತಿದ್ದೇವೆಂದರೆ ಅದಕ್ಕೆ ಮಾನವತ್ವ ಸಾರಿದ್ದ ಅಂಬೇಡ್ಕರ್ ಅವರು ನೀಡಿದ ಸಂವಿಧಾನ ಕಾರಣ ಎಂದು ಸ್ಮರಿಸಿದರು.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಸಂವಿಧಾನದ ಮೂಲ ತತ್ವಗಳನ್ನು ದುರ್ಬಲಗೊಳಿಸುವ ಯತ್ನಗಳು ನಡೆಯುತ್ತಿರುವುದು ಆತಂಕಕಾರಿ ವಿಚಾರ. ಸಂವಿಧಾನ ಉಳಿಸಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಸಂವಿಧಾನ ತಿದ್ದಲು ಯತ್ನಿಸುವವರು ಅಂಬೇಡ್ಕರ್ ವಿರೋಧಿಗಳು ಎಂದು ತಿಳಿಸಿದರು.
ಇತಿಹಾಸದ ಅಧ್ಯಯನದಿಂದಲೇ ಸಂವಿಧಾನದ ದೂರದೃಷ್ಟಿಯ ಆಶಯವನ್ನು ಸಮಗ್ರವಾಗಿ ಅರಿತುಕೊಳ್ಳಬಹುದು. ಕಾಂಗ್ರೆಸ್ ಪಕ್ಷ ಬಡವರು, ಶೋಷಿತರು ಹಾಗೂ ಮಹಿಳೆಯರ ಹಕ್ಕುಗಳನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನವು ಸರ್ವರಿಗೂ ಸಮಬಾಳು, ಸಮಪಾಲು ತತ್ವವನ್ನು ಅಳವಡಿಸಿಕೊಂಡಿದ್ದು, ಇದರ ಮೂಲಕ ಜಗತ್ಪ್ರಸಿದ್ಧಿ ಪಡೆದಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ಅಂಬೇಡ್ಕರ್ ಅವರು ರಾಷ್ಟ್ರಕ್ಕೆ ಸಮರ್ಪಿಸಿದ ಸಂವಿಧಾನದಲ್ಲಿ ಭಾರತೀಯರಿಗೆ ಕೊಡುಗೆಯಾಗಿ ನೀಡಿದ ಮತದಾನದ ಹಕ್ಕನ್ನು ಇಂದು ಕಸಿಯುವ ಹುನ್ನಾರ ನಡೆಸಲಾಗುತ್ತಿದ್ದು, ಇದರಿಂದ ಕೋಟ್ಯಾಂತರ ಜನರು ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಇದರ ವಿರುದ್ಧ ಜಾಗರೂಕರಾಗಿ ಹೋರಾಟಬೇಕು ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ, ರಾಜ್ಯ ನಿಗಮ ಮಂಡಳಿ ಅಧ್ಯಕ್ಷರಾದ ಲಾವಣ್ಯ ಬಳ್ಳಾಲ್, ಶಾಲೆಟ್ ಪಿಂಟೋ, ಮಮತಾ ಗಟ್ಟಿ, ಮೂಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ಮಾಜಿ ಮೇಯರಾದ ಶಶಿಧರ್ ಹೆಗ್ಡೆ, ಕೆ.ಹರಿನಾಥ್, ಡಿಸಿಸಿ ಉಪಾಧ್ಯಕ್ಷರಾದ ಅಬೂಬಕ್ಕರ್ ಕುದ್ರೋಳಿ, ಅಬ್ದುಲ್ ರವೂಫ್, ನೀರಜ್ ಚಂದ್ರಪಾಲ್, ಶುಭೋದಯ ಆಳ್ವ, ಚಿತ್ತರಂಜನ್ ಶೆಟ್ಟಿ ಬೊಂಡಾಲ, ಮುಖಂಡರಾದ ಆರ್.ಕೆ. ಫೃಥ್ವಿರಾಜ್, ಮಲಾರ್ ಮೋನು, ಪ್ರಕಾಶ್ ಸಾಲ್ಯಾನ್, ಪದ್ಮನಾಭ ಅಮೀನ್, ಇಬ್ರಾಹೀಂ ನವಾಝ್, ಎಸ್.ಅಪ್ಪಿ, ಜೋಕಿಂ ಡಿಸೋಜಾ, ಚೇತನ್ ಬೆಂಗ್ರೆ, ಅಶೋಕ್ ಡಿ.ಕೆ, ಅಶ್ರಫ್ ಬಜಾಲ್, ಸಂಶುದ್ದೀನ್ ಬಂದರ್, ನವೀನ್ ಡಿಸೋಜಾ, ಡೆನ್ನಿಸ್ ಡಿಸಿಲ್ವ, ಯು.ಎಚ್.ಖಾಲಿದ್, ಶಬೀರ್ ಸಿದ್ದಕಟ್ಟೆ, ಸೇಸಮ್ಮ, ಗೀತಾ ಅತ್ತಾವರ, ಚಂದ್ರಕಲಾ ಜೋಗಿ ಮತ್ತಿತರರು ಉಪಸ್ಥಿತರಿದ್ದರು. ದಿನೇಶ್ ಮುಳೂರು ವಂದಿಸಿದರು.
