ಹುಬ್ಬಳ್ಳಿ: ಪ್ಲಾಸ್ಟಿನೇಷನ್ ಸಾಧನೆಗೆ ಡಾ. ಅಶ್ವಿನ್‌ಗೆ ರಾಷ್ಟ್ರ ಮಟ್ಟದ ಗೌರವ

ಹುಬ್ಬಳ್ಳಿ: ಆಯುರ್ವೇದ ಕ್ಷೇತ್ರದ ಪ್ರತಿಷ್ಠಿತ ವೇದಿಕೆಯಾದ ತದ್ವಿದ್ಯ ಸಂಭಾಷಾ ಪರಿಷತ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ 8ನೇ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ, ಮಂಗಳೂರು ನಾಟೆಕಲ್‌ನ ಕನಚೂರು ಆಯುರ್ವೇದ ವೈದ್ಯಕೀಯ ಕಾಲೇಜಿನ ರಚನಾ ಶರೀರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಅಶ್ವಿನ್ ಕೆ ಅವರಿಗೆ “ಶರೀರರಚನಾವಿದ – ಯಂಗ್ ಅನಾಟಮಿಸ್ಟ್ ಪ್ರಶಸ್ತಿ” ಪ್ರದಾನಿಸಿ ಗೌರವಿಸಲಾಯಿತು.
ಭಾರತದಲ್ಲೇ ಮೊದಲ ಬಾರಿಗೆ ಪೂರ್ಣ ಭ್ರೂಣದ ಪ್ಲಾಸ್ಟಿನೇಷನ್ ಸಾಧನೆಗೈದು ವೈದ್ಯಕೀಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗೆ ಅವರು ಪಾತ್ರರಾಗಿದ್ದಾರೆ. ಈ ಸಾಧನೆ ಅನಾಟಮಿ ಅಧ್ಯಯನ ಮತ್ತು ವೈದ್ಯಕೀಯ ಶಿಕ್ಷಣದ ಕ್ಷೇತ್ರದಲ್ಲಿ ಹೊಸ ದಿಕ್ಕನ್ನು ತೆರೆದಿರುವ ಮಹತ್ವದ ಮೈಲುಗಲ್ಲೆಂದು ಪರಿಗಣಿಸಲಾಗಿದೆ.

ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಡೆದ ಸಮ್ಮೇಳನದಲ್ಲಿ ಭಾರತೀಯ ವೈದ್ಯಕೀಯ ಪರಂಪರಾ ಆಯೋಗದ (NCISM) ಅಧ್ಯಕ್ಷರಾದ ಡಾ. ಅಲ್ಲಮಪ್ರಭು ಗುಡ್ಡ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ. ಪ್ರಶಾಂತ್ ಎ.ಎಸ್., ಗೋವಿಂದ ಜೋಶಿ, ಡಾ. ವಿ.ಎಸ್.ವಿ. ಪ್ರಸಾದ್, ಡಾ. ಜೆ.ಆರ್. ಜೋಶಿ ಹಾಗೂ ಸಂಜೀವ್ ಜೋಶಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದೇಶದ ನಾನಾ ಭಾಗಗಳಿಂದ ಆಗಮಿಸಿದ ಪಂಡಿತರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಪಾಲ್ಗೊಂಡು ಆಯುರ್ವೇದ ಹಾಗೂ ಸಂಬಂಧಿತ ವಿಜ್ಞಾನ ಕ್ಷೇತ್ರಗಳಲ್ಲಿನ ನವೀನ ಆವಿಷ್ಕಾರಗಳು, ಸಂಶೋಧನೆಗಳು ಮತ್ತು ಭವಿಷ್ಯದ ದಿಕ್ಕುಗಳ ಕುರಿತು ವಿಚಾರ ವಿನಿಮಯ ನಡೆಸಿದರು.

ಡಾ. ಅಶ್ವಿನ್ ಕೆ ಅವರಿಗೆ ಶಾಲು, ಫಲಕ ಮತ್ತು ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಪ್ಲಾಸ್ಟಿನೇಷನ್ ತಂತ್ರಜ್ಞಾನವು ಜೀವಕೋಶಗಳಲ್ಲಿನ ನೀರು ಮತ್ತು ಕೊಬ್ಬನ್ನು ಪಾಲಿಮರ್ ಮೂಲಕ ಬದಲಾಯಿಸುವ ಅತ್ಯಾಧುನಿಕ ವಿಧಾನವಾಗಿದ್ದು, ಅನಾಟಮಿ ಅಧ್ಯಯನದಲ್ಲಿ ಕ್ರಾಂತಿಕಾರಿ ಮಹತ್ವ ಪಡೆದಿದೆ.

ಈ ಗೌರವವು ಯುವ ಸಂಶೋಧಕರ ಸಾಮರ್ಥ್ಯ, ನಿಷ್ಠೆ ಮತ್ತು ವೈಜ್ಞಾನಿಕ ಮನೋಭಾವಕ್ಕೆ ದೊರೆತ ಮಾನ್ಯತೆಯಾಗಿ ಪರಿಗಣಿಸಲ್ಪಡುತ್ತಿದ್ದು, ಪರಂಪರಾ ಮತ್ತು ಆಧುನಿಕ ವೈದ್ಯಕೀಯ ಕ್ಷೇತ್ರಗಳ ಸಮನ್ವಯದಲ್ಲಿ ಯುವ ಪ್ರತಿಭೆಗಳ ಪಾತ್ರವನ್ನು ಮತ್ತೊಮ್ಮೆ ಉನ್ನತ ಮಟ್ಟಕ್ಕೆ ಎತ್ತಿ ಹಿಡಿದಿದೆ.

Leave a Reply

Your email address will not be published. Required fields are marked *