ಝಾರ್ಖಂಡ್–ಪಶ್ಚಿಮ ಬಂಗಾಳ ತೀರ್ಥಯಾತ್ರೆ ಪೂರ್ಣಗೊಳಿಸಿದ ಮೂಡುಬಿದಿರೆ ಸ್ವಾಮೀಜಿ

ಮೂಡುಬಿದಿರೆ, ಜು. 23: ಶ್ರೀ ದಿಗಂಬರ ಜೈನ ಮಠದ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳು ಜುಲೈ 17ರಿಂದ 21ರವರೆಗೆ ಝಾರ್ಖಂಡ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ಜೈನ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಜುಲೈ 17ರಂದು ಝಾರ್ಖಂಡ್ ರಾಜ್ಯದ ರಾಂಚಿಯ ಜಿನಮಂದಿರದಲ್ಲಿ ದರ್ಶನ ಪಡೆದ ಸ್ವಾಮೀಜಿಗಳು, ಜುಲೈ 18ರಂದು ಬೆಳಿಗ್ಗೆ 5.30ರಿಂದ 11 ಗಂಟೆಯವರೆಗೆ ಸುಮಾರು 17 ಮೈಲುಗಳ ಪರಿಕ್ರಮೆಯುಳ್ಳ ಜೈನರ ಶಾಶ್ವತ ಸಿದ್ಧಕ್ಷೇತ್ರವಾದ ಸಮ್ಮೇದ ಗಿರಿ (ಮಧುಬನ್)ಯ ಇಪ್ಪತ್ತು ಕೂಟಗಳ ದರ್ಶನ ಮಾಡಿದರು. ಈ ಸಂದರ್ಭದಲ್ಲಿ ಮೂಲತಃ ಕುಂದಾಪುರ ತಾಲೂಕಿನ ಬೈಂದೂರು ನಿವಾಸಿಯಾಗಿರುವ ವಯೋವೃದ್ಧ ಆಚಾರ್ಯ ಶಂಭವ ಸಾಗರರ ದೀಕ್ಷಾ ದಿನ ಸಮಾರಂಭದಲ್ಲಿಯೂ ಪಾಲ್ಗೊಂಡರು.

ಅದೇ ದಿನ ಸಂಜೆ ಗುಣಾಯತನ ತೀರ್ಥದಲ್ಲಿ ನಡೆದ ಶಂಕಾ-ಸಮಾಧಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ವಾಮೀಜಿಗಳು ಧರ್ಮೋಪದೇಶ ನೀಡಿದರು. ಕಾರ್ಯಕ್ರಮದಲ್ಲಿ ಪ.ಪೂ. 108 ಪ್ರಮಾಣ ಸಾಗರ ಮುನಿ ಮಹಾರಾಜರು ಮಾತನಾಡಿ, “ಉತ್ತಮ ಭಾವನೆಯೇ ಉತ್ತಮ ಗತಿಗೆ ಕಾರಣ. ಮನುಷ್ಯರು ಮೃಗಗಳಂತೆ ವರ್ತಿಸದೆ ಸದಾ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಹಿಂಸೆಯಲ್ಲಿ ತೊಡಗುವವರು ದುಃಖವನ್ನು ಅನುಭವಿಸುತ್ತಾರೆ. ಸತ್ಕ್ರಿಯೆಯಿಂದ ಜೀವನ ಪಾವನವಾಗುತ್ತದೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸ್ವಾಮೀಜಿಗಳು ಮುನಿಗಳ ‘ಫೀಲ್ ಹಿಲ್’ ಎಂಬ ಹಿಂದಿ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, “ಪವಿತ್ರ ಕ್ಷೇತ್ರಗಳ ಚರಣಗಳನ್ನು ಉತ್ತಮ ಭಾವನೆಯಿಂದ ದರ್ಶನ ಮಾಡುವವರಿಗೆ ಪುಣ್ಯವು ಬೆಟ್ಟದಂತೆ ಗಟ್ಟಿಯಾಗಿ ಅಚಲವಾಗಿರುತ್ತದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿವೇಕ್ ಜೈನ್ ಸ್ವಾಗತಿಸಿದರು. ಕೈಲಾಶ್ ಜೈನ್, ಮಹಾವೀರ್ ಶಾಸ್ತ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಮುನಿಗಳ ಸಮ್ಮುಖದಲ್ಲಿ ಸ್ವಾಮೀಜಿಗಳಿಗೆ ಗೌರವ ಸಮರ್ಪಣೆ ನಡೆಯಿತು.

ಜುಲೈ 21ರಂದು ಪಶ್ಚಿಮ ಬಂಗಾಳದ ಕೊಲ್ಕತ್ತಾ–ಹೌರಾದ ಡಾಬ್ಸನ್ ರಸ್ತೆಯಲ್ಲಿರುವ ಭಗವಾನ್ ಪಾರ್ಶ್ವನಾಥ ಸ್ವಾಮಿ ಬಸದಿಯಲ್ಲಿ ಆಶಾಢ ಅಷ್ಟಾಹ್ನಿಕಾ ಮಹೋತ್ಸವದ ಎಂಟು ದಿನಗಳ ಪೂಜೆಯ ಮೊದಲ ದಿನದ ಅಭಿಷೇಕದಲ್ಲಿ ಸ್ವಾಮೀಜಿಗಳು ಭಾಗವಹಿಸಿ ಧರ್ಮೋಪದೇಶ ನೀಡಿದರು. ಶ್ರೀ ಪುಕರಾಜ್ ಜೈನ್, ಮಾಲ್‌ಚಂದ್ ಜೈನ್ ಹಾಗೂ ಕಜ್ ಜೈನ್ ಅವರು ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿ ಆಶೀರ್ವಾದ ಪಡೆದರು.

ತೀರ್ಥಯಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸ್ವಾಮೀಜಿಗಳು ಜುಲೈ 21ರ ರಾತ್ರಿ ಮೂಡುಬಿದಿರೆ ಕ್ಷೇತ್ರಕ್ಕೆ ಮರಳಿದರು.

Leave a Reply

Your email address will not be published. Required fields are marked *