ಮೂಡುಬಿದಿರೆ: ಶಾಲಾ ಶಿಕ್ಷಣವು ಪಠ್ಯಕ್ಕೆ ಮಾತ್ರ ಸೀಮಿತವಾಗದೆ, ಕಲೆ, ಸಾಹಿತ್ಯ, ಕ್ರೀಡೆ, ಶಿಸ್ತು ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿದಾಗ ಮಾತ್ರ ವಿದ್ಯಾರ್ಥಿಯ ವ್ಯಕ್ತಿತ್ವ ಪರಿಪೂರ್ಣವಾಗುತ್ತದೆ ಎಂದು ಜೈನ ಪ್ರೌಢಶಾಲೆಯ ವಿಶ್ರಾಂತ ಮುಖ್ಯೋಪಾಧ್ಯಾಯ ಹಾಗೂ ಶಿಕ್ಷಣ ಚಿಂತಕ ಮುನಿರಾಜ ರೆಂಜಾಳ ಹೇಳಿದರು.








ಅವರು ಶನಿವಾರ ಪುತ್ತಿಗೆಯ ವಿವೇಕಾನಂದನಗರದಲ್ಲಿರುವ ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ 2026–27ನೇ ಸಾಲಿನ ನೂತನ ಶಾಲಾ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಡಾ. ಆಳ್ವರ ದೂರದೃಷ್ಟಿಯ ಶಿಕ್ಷಣ ಪರಿಕಲ್ಪನೆಯಿಂದ ಶಾಲೆ ರಾಜ್ಯದ ಮಾದರಿ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿ ರೂಪುಗೊಂಡಿದೆ. ಶಿಕ್ಷಣದ ನಿಜವಾದ ಉದ್ದೇಶ ಉತ್ತಮ ಅಂಕಗಳನ್ನು ಗಳಿಸುವುದಷ್ಟೇ ಅಲ್ಲ, ಉತ್ತಮ ವ್ಯಕ್ತಿತ್ವವನ್ನು ರೂಪಿಸುವುದಾಗಿದೆ ಎಂದರು.
ಪಕ್ಷಿಗೆ ಎರಡು ರೆಕ್ಕೆಗಳು ಹೇಗೆ ಅವಶ್ಯವೋ, ವಿದ್ಯಾರ್ಥಿ ಜೀವನಕ್ಕೂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಅಷ್ಟೇ ಅಗತ್ಯ, ಕಲೆ, ಸಾಹಿತ್ಯ, ಕ್ರೀಡೆ, ಸಂಸ್ಕೃತಿ, ಶಿಸ್ತು, ಸಂಯಮ, ತಾಳ್ಮೆ ಹಾಗೂ ಉತ್ತಮ ಹವ್ಯಾಸಗಳು ವಿದ್ಯಾರ್ಥಿಯ ವ್ಯಕ್ತಿತ್ವವನ್ನು ಸಮೃದ್ಧಗೊಳಿಸುತ್ತವೆ. ಪಠ್ಯವನ್ನು ಕಂಠಪಾಠ ಮಾಡುವುದಕ್ಕಿಂತ ಅದರ ಸಂದರ್ಭ, ಸಮಾಜ ಮತ್ತು ಜೀವನದೊಂದಿಗೆ ಇರುವ ಸಂಬಂಧವನ್ನು ಅರ್ಥೈಸಿಕೊಳ್ಳುವ ಸಾಮಥ್ರ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಖ್ಯಾತ ವಿಜ್ಞಾನಿ ಅಲ್ಬರ್ಟ್ ಐನ್‍ಸ್ಟೀನ್‍ರವರ ವಿಚಾರಗಳನ್ನು ಉಲ್ಲೇಖಿಸಿದ ಅವರು, “ನಾಲ್ಕು ಗೋಡೆಗಳ ನಡುವೆ ಕಲಿತದ್ದಕ್ಕಿಂತ ಜೀವನದಲ್ಲಿ ನೆನಪಾಗಿ ಉಳಿಯುವುದೇ ನಿಜವಾದ ಶಿಕ್ಷಣ” ಎಂದರು. ಪಠ್ಯದ ಜೊತೆಗೆ ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳುವ ಸಾಮಥ್ರ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಸಂಸತ್ತು ನಾಯಕತ್ವ, ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸುವ ಪರಿಣಾಮಕಾರಿ ವೇದಿಕೆಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಳ್ವಾಸ್ ಶಾಲೆಗಳ ಆಡಳಿತಾಧಿಕಾರಿ ಪ್ರೀತಮ್ ಕುಂದರ್ ವಹಿಸಿದ್ದರು. ಆಳ್ವಾಸ್ ಕೇಂದ್ರೀಯ ಪ್ರಾಥಮಿಕ ಶಾಲೆಗಳ ಆಡಳಿತಾಧಿಕಾರಿ ಗುರುಪ್ರಸಾದ್ ಹಾಗೂ ಕನ್ನಡ ಮಾಧ್ಯಮ ಶಾಲೆಯ ಸಹ ಆಡಳಿತಾಧಿಕಾರಿ ರಾಜೇಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಶಾಲೆಯ ಮುಖ್ಯೋಪಾಧ್ಯಾಯ ಪ್ರಶಾಂತ್ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಹತ್ತನೇ ತರಗತಿಯ ವಿದ್ಯಾರ್ಥಿನಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿ, ಸಿಂಚನಾ ಹಿರೇಮಠ ಸ್ವಾಗತಿಸಿ, ಸಿದ್ದಾರೂಡ ವಂದಿಸಿದರು.
